New Delhi: ಭಾರತದ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ (LK Advani) ಅವರ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕ ಅಬೂಬಕರ್ ಸಿದ್ದಿಕಿಯನ್ನು ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳ ಕೊನೆಗೂ ಬಂಧಿಸಿದೆ.
2011ರ ಮಧುರೈನಲ್ಲಿ ನಡೆದ ರಥಯಾತ್ರೆ ಸಂದರ್ಭದಲ್ಲಿ ಅಡ್ವಾಣಿಯವರನ್ನು ಗುರಿಯಾಗಿಸಿಕೊಂಡು ಪೈಪ್ ಬಾಂಬ್ ಇಡುವ ಯೋಜನೆ ರೂಪಿಸಲಾಗಿತ್ತು. ಈ ಸಂಚಿನಲ್ಲಿ ಭಾಗಿಯಾಗಿದ್ದ ಅಬೂಬಕರ್ ಅನ್ನು ಸುಮಾರು 30 ವರ್ಷಗಳ ನಂತರ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಅಡಗಿದ್ದ ಸ್ಥಳದಿಂದ ಬಂಧಿಸಲಾಗಿದೆ.
ಅಬೂಬಕರ್ ದಕ್ಷಿಣ ಭಾರತದಲ್ಲಿ ನಡೆದ ಹಲವಾರು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ. ಚೆನ್ನೈ, ತಿರುಚಿರಾಪಳ್ಳಿ, ಕೊಯಮತ್ತೂರು ಮತ್ತು ಕೇರಳದ ಹಲವಾರು ಭಾಗಗಳಲ್ಲಿ 1995ರಿಂದ 2011ರವರೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತ ತೊಡಗಿದ್ದಾನೆ.
ಭದ್ರತಾ ಮಾಹಿತಿ ಮತ್ತು ಗುಪ್ತಚರ ಸಂಸ್ಥೆಗಳ ಸಹಕಾರದಿಂದ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳ ಈತನು ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಬಂಧಿಸಿದೆ. ಜೊತೆಗೆ ಮತ್ತೊಬ್ಬ ಪರಾರಿಯಾಗಿದ್ದ ಮೊಹಮ್ಮದ್ ಅಲಿಯಸ್ ಯೂನಸ್ ಅಲಿಯಸ್ ಮನ್ಸೂರ್‌ನನ್ನೂ ಬಂಧಿಸಲಾಗಿದೆ.
ಅಬೂಬಕರ್ ಮೇಲೊಂದು ₹5 ಲಕ್ಷ ರೂ. ಬಹುಮಾನ ಘೋಷಿತವಾಗಿತ್ತು. ಆತ ಮೂರು ದಶಕಗಳಿಂದ ಪೊಲೀಸರು ಹುಡುಕುತ್ತಿದ್ದ ಅಪರಾಧಿಯಾಗಿದ್ದು, ಹಲವು ಕೋಮು ಗಲಭೆ ಮತ್ತು ಬಾಂಬ್ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.