ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋ (ISRO) ಸಂಸ್ಥೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಬಾಂಬ್ (Bomb threat) ಸ್ಫೋಟ ಮಾಡುವುದಾಗಿ ಒಂದು ಬೆದರಿಕೆ ಕರೆ ಬಂದಿದ್ದು, ಭದ್ರತಾ ಯಂತ್ರಾಂಗಗಳು ಎಚ್ಚರಿಕೆಯಾಗಿವೆ.
ಈ ಬೆದರಿಕೆ ಕರೆ ಭಾನುವಾರದ ಮಧ್ಯರಾತ್ರಿ ತಮಿಳುನಾಡಿನ ಕಮ್ಯಾಂಡ್ ಸೆಂಟರ್‌ಗೆ ಬಂದಿದ್ದು, ಕಡಲತೀರದ ಮಾರ್ಗದಿಂದ ದಾಳಿ ನಡೆಯಲಿದೆ ಎಂದು ತಿಳಿಸಲಾಗಿತ್ತು. ಕೂಡಲೇ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ಅಲರ್ಟ್ ಮಾಡಿದ್ದು, ಸೋಮವಾರ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ಆರಂಭವಾಯಿತು.
ಸಿಐಎಸ್ಎಫ್ ಮತ್ತು ಪೊಲೀಸರು ಸೇರಿ ಶಾರ್ ಕೇಂದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಿದರು. ಕಡಲ ಮಾರ್ಗಗಳಲ್ಲಿ ಕೋಸ್ಟ್ ಗಾರ್ಡ್ ತೀವ್ರ ತಪಾಸಣೆ ಆರಂಭಿಸಿತು. ಶಾರ್ ನೌಕರರ ಕಾಲೋನಿಯ ದ್ವಾರಗಳಲ್ಲಿಯೂ ಪರಿಶೀಲನೆ ನಡೆದಿದೆ. ಈ ತಪಾಸಣೆಯು ನಾಯ್ಡುಪೇಟೆ ಡಿಎಸ್ಪಿ ಚೆಂಚು ಬಾಬು ಅವರ ನೇತೃತ್ವದಲ್ಲಿ ನಡೆಯಿತು.
ಆರಂಭಿಕ ತನಿಖೆಯಲ್ಲಿ ಇದು ಕಿಡಿಗೇಡಿಗಳ ಕೃತ್ಯವಾಗಿರಬಹುದು ಎಂಬ ಊಹೆ ವ್ಯಕ್ತವಾಗಿದೆ. ಆದರೆ ಯಾವುದೇ ಅಸಾಧ್ಯತೆಯನ್ನು ತಡೆಗಟ್ಟುವ ದೃಷ್ಟಿಯಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇಸ್ರೋ ನ ಅನೇಕ ಯಶಸ್ವಿ ಬಾಹ್ಯಾಕಾಶ ಉಡಾವಣೆಗಳ ನಡುವೆ ಈ ಬೆದರಿಕೆ ಬೆಳಕಿಗೆ ಬಂದಿದ್ದು, ಭದ್ರತೆಗೊಂದು ಪ್ರಮುಖ ಆಯಾಮವನ್ನೇ ನೀಡಿದೆ.
SDSC SHAR ಇಸ್ರೋದ ಪ್ರಮುಖ ಉಡಾವಣಾ ಕೇಂದ್ರವಾಗಿದ್ದು, ದೇಶದಷ್ಟೇ ಅಲ್ಲದೆ ಜಾಗತಿಕ ಮಟ್ಟದ ಗ್ರಾಹಕರಿಗೆ ಉಪಗ್ರಹ ಉಡಾವಣೆ ಸೇವೆ ಒದಗಿಸುತ್ತಿದೆ. ಈ ಹಿನ್ನೆಲೆ ಈ ಬೆದರಿಕೆಯನ್ನು ಬಹುಮುಖ್ಯವಾಗಿ ಪರಿಗಣಿಸಲಾಗುತ್ತಿದೆ. ತನಿಖಾ ಸಂಸ್ಥೆಗಳು ಕರೆ ಬಂದ ಸ್ಥಳ ಮತ್ತು ವ್ಯಕ್ತಿಯನ್ನು ಪತ್ತೆ ಹಚ್ಚಲು ಮುಂದಾಗಿವೆ.