Bengaluru: ರಾಜ್ಯದಲ್ಲಿ 13 ಲಕ್ಷ ಅನರ್ಹ BPL ಕಾರ್ಡ್ದಾರರಿದ್ದು, (BPL Card) ಅವುಗಳನ್ನು ತೆಗೆದುಹಾಕಿ ಅರ್ಹರಿಗೆ ಕಾರ್ಡ್ ನೀಡಲು ಮುಂದಿನ ತಿಂಗಳಿಂದ ವೆಬ್‌ಸೈಟ್ ತೆರೆಯಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಕ್ಷಣ ಪಡಿತರ ಕಾರ್ಡ್ ಸಿಗುವಂತೆ ಪ್ರತ್ಯೇಕ ಪೋರ್ಟಲ್ ಆರಂಭಿಸಲಾಗುತ್ತಿದೆ. 24 ಗಂಟೆಗಳ ಒಳಗೆ ವೈದ್ಯಕೀಯ ನೆರವಿಗೆ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ 25 ಲಕ್ಷ ಎಪಿಎಲ್ ಕಾರ್ಡ್‌ಗಳಲ್ಲಿ 1 ಲಕ್ಷ ಮಂದಿ ಅಕ್ಕಿ ಪಡೆಯುತ್ತಿಲ್ಲ. ಆದ್ದರಿಂದ ಎಪಿಎಲ್ ಕಾರ್ಡ್‌ಗೆ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ. ಒಟ್ಟಾರೆ ಕಾರ್ಡ್‌ಗಳಲ್ಲಿ ಶೇಕಡಾ 75 ಬಿಪಿಎಲ್ ಕಾರ್ಡ್‌ಗಳಿದ್ದು, ಇದು ಆಂಧ್ರ, ತೆಲಂಗಾಣ, ತಮಿಳುನಾಡಿಗಿಂತ ಹೆಚ್ಚು. ಬಿಪಿಎಲ್ ಪಟ್ಟಿಯಲ್ಲಿ ಅನರ್ಹರನ್ನು ಎಪಿಎಲ್ ವ್ಯಾಪ್ತಿಗೆ ತರುತ್ತೇವೆ.
ಅರ್ಹರ ಕಾರ್ಡ್ ತಪ್ಪಾಗಿ ರದ್ದು ಆದರೆ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೆ ತಕ್ಷಣ ಮರುನೀಡಲಾಗುತ್ತದೆ. ಅನರ್ಹರ ಪರಿಷ್ಕರಣೆಯ ನಂತರ ಹೊಸ ಬಿಪಿಎಲ್ ಕಾರ್ಡ್ ನೀಡಲಾಗುವುದು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಹೆಚ್ಚು ಬಿಪಿಎಲ್ ಫಲಾನುಭವಿಗಳಿದ್ದು, ಕೇಂದ್ರ ಸರ್ಕಾರ 11 ಹಾಗೂ ರಾಜ್ಯ ಸರ್ಕಾರ 5 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡ ಅನುಸರಿಸಿದರೆ ಬಿಪಿಎಲ್ ಫಲಾನುಭವಿಗಳ ಸಂಖ್ಯೆ ಶೇಕಡಾ 35ಕ್ಕೆ ಇಳಿಯಲಿದೆ.