Bengaluru: ಕರ್ನಾಟಕದಲ್ಲಿ ರ್ಯಾಪಿಡೋ ಮತ್ತು ಉಬರ್ ಬೈಕ್ ಟ್ಯಾಕ್ಸಿ (Bike Taxis) ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ನೀಡಿದ್ದಾರೆ. ಅವರು ಈ ಬಗ್ಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಪತ್ರ ಬರೆದು, ಹೈಕೋರ್ಟ್ ಆದೇಶವನ್ನು ಪಾಲಿಸಲು ಸೂಚಿಸಿದ್ದಾರೆ. ಇದರಿಂದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಬಹುಮಾನವಾದ ಹೋರಾಟದಲ್ಲಿ ಜಯ ಸಿಕ್ಕಂತಾಗಿದೆ.
2022ರಲ್ಲಿ ಉಬರ್ ಮತ್ತು ಇತರ ಕಂಪನಿಗಳು ಮೋಟಾರ್ ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಿದ್ದರು. ಈ ವಿಚಾರವನ್ನು ಕೈಗೆತ್ತಿಕೊಂಡ ಹೈಕೋರ್ಟ್ ಈ ಏಪ್ರಿಲ್ 2ರಂದು, ಆರು ವಾರಗಳೊಳಗೆ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲು ಆದೇಶಿಸಿತ್ತು.
1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ಪ್ರಕಾರ, ಅಗತ್ಯ ನಿಯಮಗಳು ಇಲ್ಲದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಚಲಾಯಿಸಲು ಅವಕಾಶವಿಲ್ಲ. ಹೀಗಾಗಿ, ಹೈಕೋರ್ಟ್, ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳೊಳಗೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಸೂಚನೆ ನೀಡಿತ್ತು.
ಸಚಿವ ರಾಮಲಿಂಗಾರೆಡ್ಡಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, ಅಗತ್ಯ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಹೈಕೋರ್ಟ್ ಆದೇಶ ಅನುಸರಿಸಲು ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ನಿನ್ನೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವೂ ಬೈಕ್ ಟ್ಯಾಕ್ಸಿ ನಿಲ್ಲಿಸುವ ಬಗ್ಗೆ ಸಚಿವರಿಗೆ ಮನವಿ ಮಾಡಿತ್ತು.