Bengaluru: ಮೊಬೈಲ್ ಬಳಕೆದಾರರಿಗೆ ಶೀಘ್ರದಲ್ಲೇ spam calls ಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಈಗಿನಂತೆ ಟ್ರೂ ಕಾಲರ್ (True Caller) ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಅವಲಂಬನೆ ಬೇಡ. ಟೆಲಿಕಾಂ ಕಂಪನಿಗಳು ಮೊಬೈಲ್ ಡಿಸ್ಪ್ಲೇಯಲ್ಲಿ ನೇರವಾಗಿ ಕರೆ ಮಾಡಿದವರ ಹೆಸರನ್ನು ತೋರಿಸಲು ಸಿದ್ಧತೆ ನಡೆಸುತ್ತಿವೆ.
ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ, ಎಚ್ಪಿ, ಡೆಲ್, ಎರಿಕ್ಸನ್ ಮತ್ತು ನೋಕಿಯಾ ಒಗ್ಗೂಡಿ, ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಕರೆ ಮಾಡಿದವರ ಹೆಸರು ನೇರವಾಗಿ ನಿಮ್ಮ ಮೊಬೈಲ್ ಪರದೆಯ ಮೇಲೆ ಕಾಣುವಂತೆ ಮಾಡಲಿದೆ.
ಟೆಲಿಕಾಂ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉಪಕರಣಗಳನ್ನು ಆರ್ಡರ್ ಮಾಡಿವೆ ಮತ್ತು ಹಲವೆಡೆ ಪ್ರಯೋಗಗಳನ್ನು ನಡೆಸುತ್ತಿವೆ. ಆದರೆ, ಈ ತಂತ್ರಜ್ಞಾನ ಫೀಚರ್ ಫೋನ್ ಗಳು ಬೆಂಬಲಿಸದು ಎಂಬುದು ಗಮನಿಸಬೇಕಾದ ಸಂಗತಿ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 2023 ರಲ್ಲಿ CNAP ಅನುಷ್ಠಾನಕ್ಕೆ ಶಿಫಾರಸು ಮಾಡಿತ್ತು. ಈ ತಂತ್ರಜ್ಞಾನದ ಮೂಲಕ, ಸ್ಪ್ಯಾಮ್ ಕರೆಗಳಿಂದ ಮುಕ್ತರಾಗಲು ಮತ್ತು ಪ್ರಮುಖ ಕರೆಗಳನ್ನು ಗುರುತಿಸಲು ಸುಲಭವಾಗಲಿದೆ.
CNAP ಆರಂಭದಲ್ಲಿ ಒಂದು ಕಂಪನಿಯ ಬಳಕೆದಾರರ ನಡುವೆ ಮಾತ್ರ ಕೆಲಸ ಮಾಡುತ್ತದೆ. ಉದಾಹರಣೆಗೆ, ಜಿಯೋ ಬಳಕೆದಾರರ ಹೆಸರು ಇನ್ನೊಬ್ಬ ಜಿಯೋ ಬಳಕೆದಾರನ ಮೊಬೈಲ್‌ನಲ್ಲಿ ಮಾತ್ರ ತೋರಿಸುತ್ತದೆ. ಏರ್ಟೆಲ್ ಅಥವಾ ಬೇರೆ ಕಂಪನಿಯ ಬಳಕೆದಾರರಿಗೆ ತೋರಿಸುವುದಿಲ್ಲ.
ಈ ವರ್ಷದ ಮೊದಲ ಎರಡು ತಿಂಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ನಿರ್ಬಂಧಿಸಲಾಗಿದೆ. 2024 ಫೆಬ್ರವರಿ 28ರವರೆಗೆ 7.81 ಲಕ್ಷ ಡಿಜಿಟಲ್ ವಂಚನೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. ಅಲ್ಲದೆ, 2,08,469 IMEI ಸಂಖ್ಯೆಗಳನ್ನೂ ನಿರ್ಬಂಧಿಸಲಾಗಿದೆ.