Delhi: ಖಾಸಗಿ ಟೆಲಿಕಾಂ ಕಂಪನಿಗಳು ಆಕರ್ಷಕ ಆಫರ್ ಗಳು ಮತ್ತು ಉತ್ತಮ ನೆಟ್‌ವರ್ಕ್ ನೀಡುತ್ತಿದ್ದಂತೆ, BSNL ಹಿನ್ನಡೆ ಅನುಭವಿಸಿತ್ತು. ನಷ್ಟದಲ್ಲಿ ಮುಳುಗಿದ್ದ ಈ ಸರ್ಕಾರಿ ಕಂಪನಿಯ ಮುಚ್ಚುವಿಕೆಯ ಮಾತುಕತೆಗಳು ಸಹ ನಡೆದಿದ್ದವು. ಹಳ್ಳಿಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿದರೂ, ಟವರ್ ಹತ್ತಿರವೂ ನೆಟ್‌ವರ್ಕ್ ಸಮಸ್ಯೆ ಕಂಡುಬಂದಿತ್ತು. ಗ್ರಾಹಕರು ಬೇರೆ ನೆಟ್‌ವರ್ಕ್ ಕಡೆಗೆ ಸರಿಯಲು ಆರಂಭಿಸಿದ್ದರು.
ಆದರೆ ಈಗ ಬಿಎಸ್ಎನ್ಎಲ್ ಹೊಸ ರೂಪದಲ್ಲಿ ಪುಟಿದೇಳಿದ್ದು, ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. 17 ವರ್ಷಗಳ ಬಳಿಕ, ಡಿಸೆಂಬರ್ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ದಾಖಲಿಸಿದೆ. ಕಂಪನಿಯ ನವೀನ ಯೋಜನೆಗಳು, ವೆಚ್ಚ ಆಪ್ಟಿಮೈಸೇಶನ್, ಮತ್ತು ಗ್ರಾಹಕ-ಕೇಂದ್ರಿತ ಸೇವಾ ಸುಧಾರಣೆಗಳು ಈ ಯಶಸ್ಸಿಗೆ ಕಾರಣವೆಂದು ಬಿಎಸ್ಎನ್ಎಲ್ ತಿಳಿಸಿದೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಸಾಧನೆಯನ್ನು ಮಹತ್ವದ ತಿರುವಾಗಿ ಕರೆದಿದ್ದಾರೆ. 14-18% ಸೇವೆ ವೃದ್ಧಿಯೊಂದಿಗೆ, ಬಿಎಸ್ಎನ್ಎಲ್ 4ಜಿ ಸೇವೆಗಳನ್ನೂ ಪ್ರಾರಂಭಿಸಿದೆ. 2007ರಿಂದ ನಷ್ಟ ಅನುಭವಿಸಿದ್ದ ಬಿಎಸ್ಎನ್ಎಲ್, ಈಗ ಪ್ರಗತಿಯ ಹಾದಿ ಹಿಡಿದಿದೆ.
ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದ ಅಂಕಿಅಂಶಗಳು ಆಶ್ಚರ್ಯ ಮೂಡಿಸಿದ್ದು, ಬಿಎಸ್ಎನ್ಎಲ್ ಮತ್ತೆ ಲಾಭದತ್ತ ಸಾಗುತ್ತಿದೆ.