ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದ ನಡುವೆ ಪಶುಪತಿನಾಥ ದೇವಾಲಯದಿಂದ ಹಿಂದಿರುಗುತ್ತಿದ್ದ ಭಾರತೀಯರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಸೆಪ್ಟೆಂಬರ್ 9ರಂದು ಭಾರತ-ನೇಪಾಳ ಗಡಿಯ ಸೋನೌಲಿ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಸ್ಸಿನಲ್ಲಿ 49 ಭಾರತೀಯರು ಪ್ರಯಾಣಿಸುತ್ತಿದ್ದರು. ಪ್ರತಿಭಟನಾಕಾರರು ಏಕಾಏಕಿ ಬಸ್ ಮೇಲೆ ಕಲ್ಲು ತೂರಿ ಕಿಟಕಿಗಳ ಗಾಜುಗಳನ್ನು ಒಡೆದಿದ್ದಾರೆ. ಮಹಿಳೆಯರು, ವೃದ್ಧರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕಾಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ನೇಪಾಳ ಸರ್ಕಾರದ ಸಹಾಯದಿಂದ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ.
ಬಸ್ ಚಾಲಕ ರಾಮು ನಿಶಾದ್ ಅವರು, “ಪಶುಪತಿನಾಥ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಪ್ರತಿಭಟನಾಕಾರರು ಬಸ್ ಸುತ್ತುವರಿದು ಕಾರಣವಿಲ್ಲದೆ ದಾಳಿ ನಡೆಸಿದರು. ಪ್ರಯಾಣಿಕರಲ್ಲಿ ಮಹಿಳೆಯರು, ವೃದ್ಧರು ಇದ್ದರೂ ಯಾರನ್ನೂ ಲೆಕ್ಕಿಸದೆ ಕಲ್ಲು ತೂರಿದರು” ಎಂದಿದ್ದಾರೆ.
ಸರ್ಕಾರದ ವಿರುದ್ಧ ಯುವಕರ ‘ಜೆನ್ ಝೀ’ ಗುಂಪು ಮುನ್ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಸಂಸತ್ತನ್ನು ವಿಸರ್ಜಿಸಬೇಕು, ಸಂವಿಧಾನ ತಿದ್ದುಪಡಿ ಮಾಡಬೇಕು, ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸು ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ದೇಶದಾದ್ಯಂತ ನಡೆದ ಹಿಂಸಾಚಾರದಲ್ಲಿ 34 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.