ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನರ್ ರಚನೆ (Cabinet Reshuffle) ಮಾಡಬೇಕೆಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಆಲೋಚನೆ ಬೆಳಕಿಗೆ ಬಂದಿದೆ. ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡ ನಾಗೇಂದ್ರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ನಂತರ ಪುನರ್ ಸೇರ್ಪಡೆಗೊಳಿಸುವ ಚಿಂತನೆಗೆ ಸಿಎಂ ಒಲವು ತೋರಿಸಿದ್ದಾರೆ.
ಕೆಲವರು ಸಚಿವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ಸರ್ಕಾರದಲ್ಲಿ ಗೊಂದಲ ಉಂಟುಮಾಡುತ್ತಿವೆ. ಹೀಗಾಗಿ ಈ ಸಚಿವರ ಸ್ಥಾನ ಬದಲಾವಣೆ ಅಥವಾ ಸಂಪುಟದಿಂದ ಕೈ ಬಿಡಲು ಹೈಕಮಾಂಡ್ ಗಂಭೀರ ಚರ್ಚೆ ನಡೆಸುತ್ತಿದೆ. ಈ ಸಂಬಂಧ ಕೆಪಿಸಿಸಿ ತನ್ನ ಅಸಮಾಧಾನವನ್ನು ಹೈಕಮಾಂಡ್‌ಗೆ ತಲುಪಿಸಿದೆ.
ಮಾರ್ಚ್ ವರೆಗೆ ಸಂಪುಟ ಪುನರ್ ರಚನೆ ಮಾಡಬಾರದೆಂದು ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುವರಿ ಡಿಸಿಎಂ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರಗಳು ಗೊಂದಲ ಉಂಟುಮಾಡಬಹುದು ಎಂಬ ಭಯದಿಂದ ಈ ನಿರ್ಧಾರಕ್ಕೆ ಅವರು ಮುಂದಾಗಿದ್ದಾರೆ.
ಸಂಪುಟ ಪುನರ್ ರಚನೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತ ಕೆಲ ಅತ್ಯಾಪ್ತರಿಗೂ ಹೈಕಮಾಂಡ್ ಕೋಕ್ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಹೈಕಮಾಂಡ್ ವಿವಿಧ ಮೂಲಗಳಿಂದ ಸಚಿವರ ಕಾರ್ಯವೈಖರಿ ಕುರಿತು ವರದಿ ಸಂಗ್ರಹಿಸಿದೆ. ಸಂಪುಟ ಪುನರ್ ರಚನೆಯ ಮೂಲಕ ಸಚಿವರೊಳಗಿನ ಅಸಮಾಧಾನಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯುತ್ತಿದೆ.