Toronto: ಪ್ರಧಾನ ಮಂತ್ರಿಯಾಗಿ (PM) ತಮ್ಮ ಸುದೀರ್ಘ 9 ವರ್ಷಗಳ ಆಳ್ವಿಕೆಯಲ್ಲಿ ಇದೇ ಮೊದಲ ಬಾರಿಗೆ ಜಸ್ಟಿನ್ ಟ್ರುಡೊ (Justin Trudeau) ಭಾರೀ ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ.
ತಮ್ಮದೇ ಪಕ್ಷವಾದ ಆಡಳಿತಾರೂಢ ಲಿಬರಲ್ ಪಕ್ಷದ (Liberal Party) ಸದಸ್ಯರೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 28ರ ಒಳಗೆ ಜಸ್ಟಿನ್ ಟ್ರುಡೊ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒಟ್ಟು 24 ಸಂಸದರು ಆಗ್ರಹಿಸಿದ್ಧಾರೆ. ಈ ಸಂಬಂಧ ಪತ್ರ ಬರೆದು ಸಹಿಯನ್ನೂ ಹಾಕಿದ್ದಾರೆ.
ಲಿಬರಲ್ ಪಕ್ಷವು ಮಾಧ್ಯಮಗಳಿಗೆ ಪ್ರವೇಶ ನೀಡದೆ ಕೊಠಡಿಯಲ್ಲಿ ಮುಚ್ಚಿದ ಬಾಗಿಲುಗಳ ಒಳಗೆ ಸಭೆ ನಡೆಸಿದೆ. ಈ ಸಭೆಯಲ್ಲಿ ನಡೆದ ಮಾತುಕತೆಯ ವಿವರಗಳು ಮೂಲಗಳಿಂದ ಲಭ್ಯವಾಗಿದ್ದು, ಈ ಮಾಹಿತಿ ಪ್ರಕಾರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ ಎಂದೇ ಹೇಳಲಾಗ್ತಿದೆ.
2025ರ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಹೊತ್ತಿಗೆ ಕೆನಡಾದಲ್ಲಿ ಲಿಬರಲ್ ಪಕ್ಷದ ನಾಯಕತ್ವವನ್ನು ಬೇರೆಯವರಿಗೆ ವಹಿಸುವ ಕುರಿತಾಗಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಲಿಬರಲ್ ಪಕ್ಷ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ, ಒಗ್ಗಟ್ಟಿನಿಂದ ಇದೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲೂ ತಾವೇ ಪಕ್ಷವನ್ನು ಮುನ್ನಡೆಸುವುದಾಗಿ ಹೇಳಿದರು.
ಆದರೆ ಸಭೆಯಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾದ ನಿಲುವನ್ನು ಸದಸ್ಯರು ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಸಭೆಯ ಕುರಿತು ಮಾತನಾಡಿದ ಟ್ರುಡೊ ಆಪ್ತ ಸಚಿವ ಮಿಲ್ಲರ್, ‘ಈ ಸಭೆಯಲ್ಲಿ ಎಲ್ಲ ಸಂಸದರು ಪ್ರಧಾನಿ ಅವರಿಗೆ ಸತ್ಯ ಹೇಳಿದರು. ಅವರು ಕೇಳಲಿ, ಕೇಳದೇ ಇರಲಿ ತಮ್ಮ ನಿಲುವನ್ನು ಹೇಳಿದರು’ ಎಂದು ಮಾರ್ಮಿಕವಾಗಿ ವಿವರಿಸಿದ್ದಾರೆ.
ಕೆನಡಾದಲ್ಲಿ ಇತ್ತೀಚಿಗೆ ನಡೆದ ಕೆಲವು ಉಪ ಚನಾವಣಾ ಸೋಲು ಹಾಗೂ ಭಾರತದ ಜೊತೆಗಿನ ದ್ವಿಪಕ್ಷೀಯ ಗುದ್ದಾಟ ಸೇರಿದಂತೆ ಹಲವು ವಿಚಾರಗಳು ಈ ಸಭೆಯಲ್ಲಿ ಪ್ರಸ್ತಾಪವಾದವು ಎನ್ನಲಾಗಿದೆ.
ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಿದ್ದರು. ಈ ಸಂಬಂಧ ತಮ್ಮ ಬಳಿ ಸಾಕ್ಷ್ಯ ಇಲ್ಲ ಎಂದೂ ಹೇಳಿದ್ದರು.
ಹೀಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆನಡಾ ಮುಖಭಂಗ ಅನುಭವಿಸುವಂತಾಗಿತ್ತು. ಕೆನಡಾದಲ್ಲಿ ಖಲಿಸ್ತಾನಿ ಕಿಡಿಗೇಡಿಗಳ ಆರ್ಭಟ ಹೆಚ್ಚಾಗಿದೆ ಎಂದು ಅಲ್ಲಿನ ಸಂಸದರೇ ಹಲವು ಬಾರಿ ಆರೋಪ ಮಾಡಿದ್ದಾರೆ.