
Bengaluru: ಪ್ರಸಿದ್ಧ ಜಾನಪದ ಕಲಾವಿದ ಜೋಗಿಲ ಸಿದ್ದರಾಜು ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ವಿರುದ್ಧ ಜಾತಿ ನಿಂದನೆ (Caste Abuse Allegations) ಹಾಗೂ ಹಲ್ಲೆ ಆರೋಪ ಮಾಡಿದ್ದು, ಈ ಸಂಬಂಧ ಎಸ್.ಜೆ.ಪಾರ್ಕ್ ಠಾಣೆಯಲ್ಲಿ FIR ದಾಖಲಾಗಿದೆ.
ಸಿದ್ದರಾಜು ಅವರು ಜುಲೈ 11ರಂದು ನಿರ್ದೇಶಕಿ ಗಾಯತ್ರಿ ಅವರನ್ನು ಭೇಟಿಯಾಗಿ, ಕಳೆದ ಮೂರು ವರ್ಷಗಳಿಂದ ಬಾಕಿಯಾಗಿದ್ದ ಸಂಭಾವನೆ ಕುರಿತು ಪ್ರಶ್ನೆ ಕೇಳಿದಾಗ, ಅವರನ್ನು ಜಾತಿಯ ಆಧಾರದಲ್ಲಿ ನಿಂದಿಸಿ, ಮೊಬೈಲ್ ಕಸಿದು, ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ.
ಈ ಸಂಬಂಧ ಜುಲೈ 14ರಂದು ನಡೆದ ಸಂಧಾನ ಸಭೆಗೆ ಗಾಯತ್ರಿ ಗೈರುಹಾಜರಾಗಿದ್ದರು. ಬಳಿಕ ಸಿದ್ದರಾಜು ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ನಾನು 35 ವರ್ಷಗಳಿಂದ ಜಾನಪದ ಕಲಾವಿದನಾಗಿ ಹಲವಾರು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಕಳೆದ ಮೂರು ವರ್ಷದಿಂದ ಬಾಕಿ ಇರುವ ಸಂಭಾವನೆಗಾಗಿ ನಿರ್ದೇಶಕರ ಕಚೇರಿಗೆ ಹೋಗಿದ್ದಾಗ, ನನ್ನ ದಲಿತ ಹಿನ್ನೆಲೆಯನ್ನು ತಿಳಿದು ಅವರು ಅವಮಾನಿಸಿದರು. ನಾನು ದೂರು ನೀಡಲು ಹೋಗುತ್ತಿದ್ದೆನೆಂದಾಗ ಅವರು ಮೇಜಿನ ಮೇಲಿದ್ದ ಮೌಸ್ ಪ್ಯಾಡ್ ಎಸೆದು ಹಲ್ಲೆ ಮಾಡಿದರು. ಜೊತೆಗೆ ನನ್ನೊಂದಿಗೆ ಬಂದ ಕಲಾವಿದ ನಾಗೇಶ ಅವರ ಮೊಬೈಲ್ ಕಸಿದುಕೊಂಡು ಅವರನ್ನು ಸಹ ಹಲ್ಲೆ ಮಾಡಿದರು.”
ಸಿದ್ದರಾಜು ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ನಿಜಾಂಶವನ್ನು ತಿಳಿಯಬಹುದು ಎಂದು ಒತ್ತಾಯಿಸಿದ್ದಾರೆ. ಗಾಯತ್ರಿ ಅವರು ಸಾರ್ವಜನಿಕ ಕಚೇರಿಯೊಳಗೆ ದಲಿತ ಕಲಾವಿದನಿಗೆ ಜಾತಿಯಿಂದ ನಿಂದಿಸಿ ಹಲ್ಲೆ ನಡೆಸಿದ ಕಾರಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಹೇಳಿದ್ದಾರೆ.