ಕರ್ನಾಟಕ ಸರ್ಕಾರದ ಜಾತಿಗಣತಿ ವಿಷಯ ಆಡಳಿತಾರೂಢ ಕಾಂಗ್ರೆಸ್‌ನೊಳಗೆ ತೀವ್ರ ಜಟಾಪಟಿ ಉಂಟುಮಾಡಿದೆ. ಹೊಸ ಜಾತಿಗಳನ್ನು ಸೇರಿಸಿದ್ದರಿಂದ ಗೊಂದಲ ಹೆಚ್ಚಾಗಿದೆ. ಗೊಂದಲ ಸರಿಯಾಗದಿದ್ದರೆ ಜಾತಿಗಣತಿ ಬೇಡ (Caste census controversy) ಎಂದು ಕೆಲವು ಸಚಿವರು ಸಂಪುಟ ಸಭೆಯಲ್ಲಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಎಂಬಂತೆ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಸೇರಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಸಚಿವರೇ ಸಭೆಯಲ್ಲಿ ವಿರೋಧಿಸಿದ್ದು ಸಿಎಂಗೆ ಅಸಮಾಧಾನ ಉಂಟುಮಾಡಿದೆ.
ಸಚಿವರ ವಿರೋಧದಿಂದ ಬೇಸರಗೊಂಡ ಸಿಎಂ, ಹಿಂದುಳಿದ ವರ್ಗಗಳ ಆಯೋಗಕ್ಕೆ ಕ್ರಿಶ್ಚಿಯನ್ ಜತೆ ಸೇರಿಸಿದ್ದ ಹಿಂದೂ ಜಾತಿಗಳ ಕಲಂಗಳನ್ನು ತೆಗೆದು ಹಾಕಲು ಸೂಚಿಸಿದ್ದಾರೆ. ವಿವಾದಗಳಿಗೆ ತೆರೆ ಎಳೆಯಲು ಈ ನಿರ್ಧಾರ ಕೈಗೊಂಡಿದ್ದಾರೆ.
ಇಂದು (ಸೆಪ್ಟೆಂಬರ್ 19) ಬೆಳಗ್ಗೆ 10 ಗಂಟೆಗೆ ಸಿಎಂ ಸಚಿವರ ಸಭೆ ಕರೆದಿದ್ದಾರೆ. ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆ ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಲಿದೆ.
ಜಾತಿಗಣತಿ ಕೈಪಿಡಿಯಲ್ಲಿ ಮೊದಲು 53 ಪ್ರಶ್ನೆಗಳಿದ್ದವು. ಬದಲಾವಣೆ ಬಳಿಕ 50 ಪ್ರಶ್ನೆಗಳು ಮಾತ್ರ ಉಳಿದಿವೆ. ಹೀಗಾಗಿ, 2 ಲಕ್ಷ ಕೈಪಿಡಿಗಳನ್ನು ತ್ಯಜಿಸಲಾಗಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿದ ಕೈಪಿಡಿ ಈಗ ವ್ಯರ್ಥವಾಗಿದೆ. ಸೆಪ್ಟೆಂಬರ್ 22ರಿಂದ ಸಮೀಕ್ಷೆ ಪ್ರಾರಂಭವಾಗಬೇಕಿದ್ದರೂ ಈಗ ಅನುಮಾನ ಮೂಡಿದೆ.
ಈ ಬೆಳವಣಿಗೆಯ ಬಗ್ಗೆ ಬಿಜೆಪಿ, ಸಿದ್ದರಾಮಯ್ಯ ಸಂಪುಟದಲ್ಲಿ ತಾಳಮೇಳ ಇಲ್ಲ ಎಂದು ವ್ಯಂಗ್ಯವಾಡಿದೆ.
ಜಾತಿಗಣತಿ ಈಗ ಗೊಂದಲದ ಗೂಡಾಗಿದೆ. ಸಿಎಂ ವಿವಾದಿತ ಜಾತಿಗಳನ್ನು ತೆಗೆದು ಹಾಕಲು ಸೂಚಿಸಿದ್ದಾರೆ. ಆದರೂ ನಿಗದಿಯಂತೆ ಸೋಮವಾರ ಜಾತಿಗಣತಿ ಆರಂಭವಾಗುತ್ತದೆಯಾ ಎಂಬುದು ಇನ್ನೂ ಪ್ರಶ್ನೆಯಾಗಿದೆ.







