Channapatna: ಚನ್ನಪಟ್ಟಣ (Channapatna) ಕ್ಷೇತ್ರ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟುಹಾಕುತ್ತಿದೆ. ಹಾಗಾಗಿ ಮೈತ್ರಿನಾಯಕರು ಸಭೆಗಳನ್ನು ನಡೆಸಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವ ಚಿಂತನೆ ನಡೆಸಿದ್ದರು, ಅದರ ಜೊತೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು, ಯಾರೇ ಅಭ್ಯರ್ಥಿಯಾದರೂ ಜೆಡಿಎಸ್ (JDS) ಚಿಹ್ನೆಯಡಿ ಕಣಕ್ಕೆ ಇಳಿಯಬೇಕು ಎಂಬ ಷರತ್ತು ವಿಧಿಸಿದ್ದರು ಎನ್ನಲಾಗಿದೆ.
ಅಂತಿಮವಾಗಿ BJP ಎಂಎಲ್ಸಿ ಸಿಪಿ ಯೋಗೇಶ್ವರ್ಗೆ (CP Yogeshwar) ಜೆಡಿಎಸ್ ಟಿಕೆಟ್ ಆಫರ್ ನೀಡಿತ್ತು, ಸಂಜೆಯೊಳಗೆ ನಿರ್ಧಾರ ತಿಳಿಸುವಂತೆ ಡೆಡ್ಲೈನ್ ನೀಡಿತ್ತು. ಆದರೆ ಇದೀಗ CPY ಬಿಜೆಪಿಯ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ಧಾರವಾಡದತ್ತ ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ರೆ ಬಿಜೆಪಿ ಚಿಹ್ನೆಯಡಿ ಮಾತ್ರ ಎಂದು ಯೋಗೇಶ್ವರ್ ಹೇಳಿದ್ದರು. ಆದರೆ ಯೋಗೇಶ್ವರ್ ಮಾತನ್ನು ಬಿಜೆಪಿ-ಜೆಡಿಎಸ್ ನಾಯಕರು ಯಾರೂ ಕೇರ್ ಮಾಡದ ಕಾರಣ ಇದೀಗ ಅವರು ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಇದೀಗ ಉಪಚುನಾವಣೆಯ ಕ್ಷೇತ್ರ ಚನ್ನಪಟ್ಟಣ ಮತ್ತಷ್ಟು ರಂಗು ಪಡೆಯಲಿದೆ. ಏಕೆಂದರೆ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕೆ ಇಳಿಯುವುದರಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಅವರು ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ.
ಇತ್ತ, ಮೈತ್ರಿಯೊಳಗಿನ ಬೆಳವಣಿಗೆ ನೋಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಲೆಕ್ಕಾಚಾರ ನಡೆಸುತ್ತಿದೆ. ಹೀಗಾಗಿ ಈ ಬಾರಿಯ ಚನ್ನಪ್ಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಅಖಾಡ ಮತ್ತಷ್ಟು ಹಣಾಹಣಿಗೆ ಸಾಕ್ಷಿಯಾಗಲಿದೆ.