Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ’ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ (Jilladhikari Nade Halli Kade) ಅಭಿಯಾನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R Latha) ವಹಿಸಿಕೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು “ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಎಲ್ಲ ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹರಿಸಲು ’ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಸುತ್ತಿದ್ದು ಫೆಬ್ರವರಿ 19 ರಂದು ತಾಲ್ಲೂಕಿನ ನಂದಿ ಹೋಬಳಿ ಹೊಸಹುಡ್ಯದಲ್ಲಿ ಈ ಅಭಿಯಾನದ ಪ್ರಯುಕ್ತ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮ ವಾಸ್ತವ್ಯ ದಿನದಂದು ಹೊಸಹುಡ್ಯದಲ್ಲಿ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗುವುದು. ಸರ್ಕಾರಿ ಯೋಜನೆಗಳ ಜಾಗೃತಿ ಮತ್ತು ಅನುಷ್ಠಾನಕ್ಕಾಗಿ ಮಾಹಿತಿ ಕೇಂದ್ರ, ಅರ್ಜಿ ಸ್ವೀಕಾರ ಕೇಂದ್ರ ಮತ್ತು ಮಳಿಗೆ ತೆರೆಯಲು ಮತ್ತು ಸಾಮಾಜಿಕ ಭದ್ರತಾ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ, ಇ-ಶ್ರಮ್, ಪಡಿತರ ಯೋಜನೆ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ, ಪೋಡಿ, ಹದ್ದುಬಸ್ತ್, ಆಧಾರ್, ಪೌತಿ ಖಾತೆ, ಪಹಣಿ ದೋಷ ತಿದ್ದುಪಡಿ, ಆಶ್ರಯ ವಸತಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಯಡಿ ಹೊಸಹುಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.