
Chikkaballapur : ನಗರಸಭೆ ನಿತ್ಯ ಸಂಗ್ರಹಿಸುವ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ರೈತರಿಗೆ ವಿತರಿಸುತ್ತಿರುವ ಪ್ರಯೋಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಮಾದರಿ ಯೋಗ್ದಾನಕ್ಕೆ ಸರ್ಕಾರದಿಂದ ರಾಜ್ಯ ಮಟ್ಟದ ಪ್ರಶಸ್ತಿಯೂ ಲಭಿಸಿದೆ.
ಈ ಮಾದರಿ ಕಾರ್ಯವಿಧಾನವನ್ನು ಸಮೀಪದಿಂದ ಅವಲೋಕಿಸಲು ರಾಜ್ಯದ ವಿವಿಧ ಭಾಗಗಳ 30ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಪರಿಸರ ಎಂಜಿನಿಯರ್‌ಗಳ ತಂಡ ಮಂಗಳವಾರ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿತು. ಅವರು ನಗರಸಭೆಯಿಂದ ಮಾಹಿತಿ ಪಡೆದು, ಅಣಕನೂರಿನ ರೈತರ ಗೊಬ್ಬರ ತಯಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಗೊಬ್ಬರ ಉತ್ಪಾದನೆಯ ಪ್ರಕ್ರಿಯೆ ಮತ್ತು ಪ್ರಯೋಜನಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.
ತಂಡದ ಸದಸ್ಯರು ರೈತರಿಂದ ಗೊಬ್ಬರದ ಗುಣಮಟ್ಟ, ಬಳಕೆಯ ಪ್ರಯೋಜನಗಳು, ಬೆಳೆಗಳಲ್ಲಿ ಪರಿಣಾಮಗಳ ಕುರಿತು ನೇರವಾಗಿ ಮಾಹಿತಿ ಪಡೆದರು. ರೈತರು ಈ ಗೊಬ್ಬರವನ್ನು ತಮ್ಮ ಹೊಲಗಳಲ್ಲಿ ಬಳಸುತ್ತಿರುವುದಾಗಿ ತಿಳಿಸಿ, “ಇದು ಬೆಳೆಗಳಿಗೆ ಉತ್ತಮ. ಬೇಡಿಕೆ ಕೂಡ ಹೆಚ್ಚುತ್ತಿದೆ” ಎಂದು ತಿಳಿಸಿದ್ದಾರೆ.
ಪರಿಸರ ಎಂಜಿನಿಯರ್‌ಗಳ ತಂಡ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಪೌರಕಾರ್ಮಿಕರ ವಿಶ್ರಾಂತಿ ಗೃಹಕ್ಕೂ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, “ಈ ಕಸದ ರಸವಾಗುವ ಮಾದರಿ ಯೋಜನೆ ನಗರಸಭೆ ಮತ್ತು ರೈತ ಸಹಭಾಗಿತ್ವದಿಂದ ಯಶಸ್ವಿಯಾಗಿ ನಡೆದುಕೊಂಡಿದೆ. ಈ ಯೋಜನೆ ಇಡೀ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೂ ಮಾದರಿಯಾಗಿದೆ. ನಿಮ್ಮೆಲ್ಲರೂ ಈ ಮಾದರಿಯನ್ನು ತಮ್ಮ ಸಂಸ್ಥೆಗಳಲ್ಲಿ ಅನುಸರಿಸಬಹುದು,” ಎಂದು ಸಲಹೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕಿ ಮಾಧವಿ, ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪರಿಸರ ಎಂಜಿನಿಯರ್ ಪಿ. ಉಮಾಶಂಕರ್ ಮತ್ತಿತರರು ಈ ಭೇಟಿ ಹಾಗೂ ಸಭೆಯಲ್ಲಿ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
The post ಚಿಕ್ಕಬಳ್ಳಾಪುರ ನಗರಸಭೆಯ ಹಸಿ ಕಸದ ಗೊಬ್ಬರ ರೂಪಾಂತರ ಯೋಜನೆ ರಾಜ್ಯ ಮಟ್ಟದಲ್ಲಿ ಮೆಚ್ಚುಗೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.