Kaduru, Chikkamagaluru : ಕಡೂರು ತಾಲ್ಲೂಕಿನ ಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿ (Hemagiri Mallikarjuna Swamy) ರಥೋತ್ಸವ ಭಾನುವಾರ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
ಹೇಮಗಿರಿಯ ಮೇಲಿರುವ ಮಲ್ಲಿಕಾರ್ಜುನ ಸ್ವಾಮಿಯ ಮೂಲಸ್ಥಾನದಲ್ಲಿ ಬೆಳಗ್ಗೆ ವಿಶೇಷ ರುದ್ರಾಭಿಷೇಕ ಪೂಜೆಗಳು ನಡೆದ ನಂತರ ಸರ್ವಾಲಂಕೃತ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಕಲ ಗೌರವಗಳೊಂದಿಗೆ ಗಿರಿಯ ಮೇಲಿಂದ ಕೆಳಗೆ ತರಲಾಯಿತು.
ಆಗಮಿಕರಾದ ತಿಪಟೂರಿನ ಕಾಡಶೆಟ್ಟಿ ಹಳ್ಳಿಯ ವೇದಮೂರ್ತಿ ಮಹೇಶ್ವರಯ್ಯ ಶಾಸ್ತ್ರಿ ಮತ್ತು ಬಾಗಿಲಘಟ್ಟದ ಜಗದೀಶ್‌ಶಾಸ್ತ್ರಿ ನೇತೃತ್ವದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮೂಲಾ ನಕ್ಷತ್ರದ ಸಮಯ ದಲ್ಲಿ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವವನ್ನು ನಡೆಸಲಾಯಿತು. ದೇಗುಲದ ಸಮಿತಿಯ ವತಿಯಿಂದ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು
ದೇಗುಲ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಅಧ್ಯಕ್ಷ ಕಪನೇಗೌಡ, ಧರ್ಮದರ್ಶಿಗಳಾದ ಮಂಜಣ್ಣ, ಎಲ್.ಎಂ. ಪರಮೇಶ್, ಯೋಗೀಶಪ್ಪ, ವೀರೂಪಾಕ್ಷಪ್ಪ, ರಾಜಪ್ಪ, ಗಿರೀಶ್, ನಂದೀಶ್‌ಬಾಬು, ಜಗಯ್ಯಶಾಸ್ತ್ರಿ ಉಪಸ್ಥಿತರಿದ್ದರು.