
Beijing: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಆಮದು ಮೇಲಿನ ಸುಂಕಗಳನ್ನು ಶೇ. 145ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ, ಚೀನಾ ತನ್ನ ಪ್ರತಿಕ್ರಿಯೆಯಾಗಿ ಅಮೆರಿಕದ (China-America) ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 84ರಿಂದ ಶೇ. 125ಕ್ಕೆ ಏರಿಸಿದೆ. ಈ ಹೊಸ ಸುಂಕಗಳು ಶನಿವಾರದಿಂದ ಜಾರಿಗೆ ಬರಲಿವೆ ಎಂದು ಚೀನಾ ತಿಳಿಸಿದೆ.
ಚೀನಾ ಈ ವಿಚಾರವನ್ನು ವಿಶ್ವ ವ್ಯಾಪಾರ ಸಂಸ್ಥೆ (WTO) ಬಳಿ ದೂರಿನಲ್ಲಿ ದಾಖಲಿಸಿದೆ. ಇದೇ ವೇಳೆ, ಕೆಲವು ಅಮೆರಿಕನ್ ಸಿನಿಮಾಗಳ ಆಮದು ಮೇಲಿನ ನಿರ್ಬಂಧಗಳನ್ನೂ ಚೀನಾ ಮುಂದುವರಿಸಿದೆ.
ಹಿಂದೆ ಚೀನಾ ಸುಂಕದ ಸಮಸ್ಯೆ ಕುರಿತು ಮಾತುಕತೆ ನಡೆಸಲು ಸಿದ್ಧತೆ ತೋರಿಸಿದ್ದರೂ, ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಮೆರಿಕ ಹಲವು ದೇಶಗಳ ಮೇಲೆ ಸುಂಕ ಹೆಚ್ಚಿಸಿದ್ದರಿಂದ, ಚೀನಾ ಮಾತ್ರವೇ ಧಿಟ್ಟಾಗಿ ಪ್ರತಿಕ್ರಿಯೆ ನೀಡಿದೆ ಎಂಬುದು ಗಮನಾರ್ಹ.
ಬುಧವಾರ ಟ್ರಂಪ್ ಚೀನಾದ ಉತ್ಪನ್ನಗಳ ಮೇಲೆ ಶೇ. 125ರಷ್ಟು ಸುಂಕ ವಿಧಿಸಿದರು. ಇದರ ಹಿಂದೆ ಚೀನಾದಿಂದ ಫೆಂಟನಿಲ್ ಎಂಬ ಅಕ್ರಮ ಮದ್ದು ಹರಡುತ್ತಿರುವ ಬಗ್ಗೆ ಆರೋಪವಿದೆ. ಈ ಹಿಂದೆ ಶೇ. 20ರಷ್ಟು ಇದ್ದ ಸುಂಕ, ಈಗ ಶೇ. 145ಕ್ಕೆ ಏರಿದೆ.
“ಅಮೆರಿಕ ಏಕಪಕ್ಷೀಯವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿರುವುದು ಅಂತಾರಾಷ್ಟ್ರೀಯ ವ್ಯಾಪಾರದ ನಿಯಮಗಳಿಗೆ ವಿರುದ್ಧವಾಗಿದೆ,” ಎಂದು ಚೀನಾ ಹಣಕಾಸು ಸಚಿವಾಲಯ ಆರೋಪಿಸಿದೆ. “ಅಮೆರಿಕ ತನ್ನ ಸುಂಕ ಹೆಚ್ಚಿಸುವ ನೀತಿಯನ್ನು ಮುಂದುವರಿಸಿದರೆ, ನಾವು ಅದನ್ನು ನಿರ್ಲಕ್ಷಿಸುತ್ತೇವೆ,” ಎಂಬ ಎಚ್ಚರಿಕೆಯನ್ನು ಸಹ ನೀಡಿದೆ.
ಚೀನಾದ ವಾಣಿಜ್ಯ ಸಚಿವಾಲಯವು 12 ಅಮೆರಿಕನ್ ಕಂಪನಿಗಳನ್ನು ತನ್ನ ರಫ್ತು ನಿಯಂತ್ರಣ ಪಟ್ಟಿಗೆ ಸೇರಿಸಿದ್ದು, 6 ಕಂಪನಿಗಳನ್ನು ‘ಅವಿಶ್ವಾಸಾರ್ಹ ಘಟಕ’ಗಳ ಪಟ್ಟಿಗೆ ಸೇರಿಸಿದೆ. ಏಪ್ರಿಲ್ 10ರಿಂದ ಹೊಸ ಸುಂಕಗಳು ಜಾರಿಗೆ ಬಂದಿವೆ. ಟ್ರಂಪ್ ನೇತೃತ್ವದ ಸರಕಾರ 60 ದೇಶಗಳ ಮೇಲೆ ಸುಂಕ ವಿಧಿಸಿರುವ ಹೊಸ ನಿಯಮಗಳು ಬುಧವಾರ ಮಧ್ಯರಾತ್ರಿಯಿಂದ ಅಮೆರಿಕದಲ್ಲಿ ಜಾರಿಗೆ ಬಂದಿವೆ.