Belagavi: ಉತ್ತರ ಕರ್ನಾಟಕದ ಮಹಿಳಾ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ನಿರ್ದೇಶಿಸಿ, ನಿರ್ಮಿಸಿರುವ ಹೊಸ ಕನ್ನಡ ಚಿತ್ರ ‘ಚುರುಮುರಿಯಾ’ (Churumuria) ನಾಳೆ (ಜೂನ್ 13) ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯ ಸಂತೋಷ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಹೇಳಿದರು.
ಈ ಚಿತ್ರಕ್ಕೆ ಅವರು ಕಥೆ ಬರೆದಿದ್ದು, ‘ಕಾಂತಾರ’ ಚಿತ್ರದ ನಟ ಮಹಾದೇವ ಹಡಪದ, ‘ಚೋಮನದುಡಿ’ ಸಿನಿಮಾದ ಶಾರದಾ ಮುಳ್ಳೂರ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರವನ್ನು ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ಜಮಖಂಡಿ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿಯೂ ಬಿಡುಗಡೆಯಾಗಲಿದೆ.
ಚಿತ್ರದ ಕಥೆ ‘ನೆಲ’ ಎಂಬ ಪುಸ್ತಕದಲ್ಲಿರುವ ಚುರುಮುರಿ ಮಾರುವ ಸಾಮಾನ್ಯ ವ್ಯಕ್ತಿಯ ಬದುಕಿನ ಸತ್ಯ ಘಟನೆ ಆಧಾರಿತವಾಗಿದೆ. ಈ ವ್ಯಕ್ತಿಯ ಜೀವನದಲ್ಲಿ ಅವಮಾನ, ನಿರಾಕರಣೆ ಇದ್ದರೂ, ಆತನು ಆತ್ಮಗೌರವದಿಂದ ಚುರುಮುರಿ ಮಾರುತ್ತಾ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ. ಮರದ ನೆರಳು, ಗಾಳಿ, ಪ್ರಕೃತಿ ಅವನಿಗೆ ತಾತ್ಕಾಲಿಕ ಪರಿಹಾರ ಕೊಡುತ್ತವೆ. ಆತನು ಮರವನ್ನು ಅಪ್ಪಿಕೊಳ್ಳುವ ದೃಶ್ಯಗಳು ಚಿತ್ರದಲ್ಲಿ ಪ್ರಮುಖವಾಗಿದೆ. ಈ ಮೌನ ಮಾತುಗಳೇ ಚಲನಚಿತ್ರದ ಕಥಾನಕ.
“ಈ ಭಾಗದಲ್ಲಿ ಸಿನಿಮಾವನ್ನು ತಯಾರಿಸುವವರು ಇಷ್ಟು ಕಡಿಮೆ ಇದ್ದಾಗ, ಮಹಿಳೆಯೊಬ್ಬಳು ಕಲಾವಿದರಿಗೆ ಅವಕಾಶ ನೀಡಿದ್ದು ಹೊಸ ಹೆಜ್ಜೆಯಾಗಿದೆ. ಈ ಚಿತ್ರವನ್ನು ಹೆಚ್ಚು ಮಂದಿ ವೀಕ್ಷಿಸಿ, ಪ್ರೋತ್ಸಾಹಿಸಬೇಕು.” ಎಂದು ನೀಲಗಂಗಾ ಚರಂತಿಮಠ ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಸುನಂದಾ ಎಮ್ಮಿ, ಭಾರತಿ ಮಠದ, ದೀಪಿಕಾ ಛಾಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.