Chamarajanagar : ಚಾಮರಾಜನಗರ ಹೊರವಲಯದ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (CIMS) ಬೋಧನಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (Pradhan Mantri Bhartiya Jan Aushadhi Kendra) ವನ್ನು ಸಂಸದ ವಿ.ಶ್ರೀನಿವಾಸ ಪ್ರಸಾದ್ (Srinivasa Prasad) ಅವರು ಶನಿವಾರ ಉದ್ಘಾಟಿಸಿ ಆಸ್ಪತ್ರೆಯ ಮುಂಭಾಗದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (RedCross Society) ಶತಮಾನೋತ್ಸವ ಭವನ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸದರು “ಬಡರೋಗಿಗಳಿಗೆ ಕೈಗೆಟುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಜನೌಷಧಿ ಕೇಂದ್ರವನ್ನು ತೆರೆಯಲಾಗಿದ್ದು ಈ ಸೌಲಭ್ಯ ಬಡವರಿಗೆ, ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಸಾಕಷ್ಟು ಸೇವಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೆಡ್‌ಕ್ರಾಸ್ ಶತಮಾನೋತ್ಸವ ಭವನ ನಿರ್ಮಿಸಲಾಗುತ್ತಿದ್ದು ಆಸ್ಪತ್ರೆಯ ಆಸುಪಾಸಿನಲ್ಲೇ ಜನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ರೋಗಿಗಳ ಆರೈಕೆಗಾಗಿ ಬರುವ ಸಂಬಂಧಿಕರು ವಾಸ್ತವ್ಯ ಹೂಡಲು ಡಾರ್ಮಿಟರಿ ನಿರ್ಮಾಣ ಮಾಡಲಾಗುತ್ತದೆ” ಎಂದು ಹೇಳಿದರು.
ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಸಿಮ್ಸ್ ಡೀನ್ ಡಾ. ಸಂಜೀವ್, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಭಾರತೀಯ ರೆಡ್–ಕ್ರಾಸ್ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಡಾ.ಎಂ.ಮಹೇಶ್, ರಾಜ್ಯಶಾಖೆಯ ಆಡಳಿತ ಮಂಡಳಿಯ ಡಾ. ರೇಣುಕಾದೇವಿ, ಡಾ.ಅಜಯ್ ಮತ್ತಿತರರು ಉಪಸ್ಥಿತರಿದ್ದರು.