ಕನ್ನಡ ಚಲನಚಿತ್ರರಂಗದ ಯುವ ನಟ ಮತ್ತು ನಿರ್ಮಾಪಕ ಸಂತೋಷ್ ಬಾಲರಾಜ್ (Santosh Balaraj ವಯಸ್ಸು 38) ಮಂಗಳವಾರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರು ಕನ್ನಡದ ಹಿರಿಯ ನಿರ್ಮಾಪಕ ದಿವಂಗತ ಆನೇಕಲ್ ಬಾಲರಾಜ್ ಅವರ ಪುತ್ರ.
ಸಂತೋಷ್ ಅವರು ಅಭಿನಯಿಸಿದ್ದ ‘ಬರ್ಕ್ಲಿ’ ಮತ್ತು ‘ಸತ್ಯಂ’ ಸಿನಿಮಾಗಳು ಇನ್ನೂ ಬಿಡುಗಡೆಯಾಗಿಲ್ಲ. ಈ ಎರಡು ಚಿತ್ರಗಳ ಬಿಡುಗಡೆಗೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಕೆಲವು ದಿನಗಳಿಂದ ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಬನಶಂಕರಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಚಿತ್ರರಂಗದ ಹಲವರು ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
‘ಕೆಂಪ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂತೋಷ್ ಅವರು ‘ಗಣಪ’ ಮತ್ತು ‘ಕರಿಯ 2’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಯಶಸ್ಸಿನ ಬಳಿಕ ಅವರು ಬರ್ಕ್ಲಿ ಮತ್ತು ಸತ್ಯಂ ಚಿತ್ರಗಳನ್ನು ನಿರ್ಮಿಸಿದ್ದರು. ಈ ಎರಡು ಸಿನಿಮಾಗಳ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿದಿದ್ದು, ಬಿಡುಗಡೆಗೆ ತಯಾರಾಗಿದ್ದವು.
ಸಂತೋಷ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದ ನಟಿ ಪ್ರಿಯಾಂಕಾ ತಿಮ್ಮೇಶ್ ಕಣ್ಣೀರು ಹಾಕಿದರು. ಯೋಗೇಶ್ ಅವರು, “ನಾವು ಒಂದೇ ಊರಿನವರು, ಒಳ್ಳೆಯ ಸ್ನೇಹಿತರು. ಈ ಸುದ್ದಿ ನನಗೆ ಶಾಕ್ ಕೊಟ್ಟಿದೆ” ಎಂದು ಭಾವುಕರಾಗಿ ಮಾತನಾಡಿದರು.
ಉತ್ತಮ ಎತ್ತರ ಮತ್ತು ವ್ಯಕ್ತಿತ್ವ ಹೊಂದಿದ್ದ ಸಂತೋಷ್ ಚಿತ್ರರಂಗದಲ್ಲಿ ದೊಡ್ಡ ಕನಸು ಕಂಡಿದ್ದರು. ಸದ್ಯದಲ್ಲೇ ಮದುವೆಯಾಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ತಾಯಿ ಮತ್ತು ತಂಗಿಯನ್ನು ಅಗಲಿದ ಸಂತೋಷ್ ಅವರ ಅಂತ್ಯಕ್ರಿಯೆಯನ್ನು ಬುಧವಾರ ಹುಟ್ಟೂರು ಆನೇಕಲ್‌ನಲ್ಲಿ ನೆರವೇರಿಸಲಾಗುವುದು.