November 2021 ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (United Nations Climate Change Conference) COP26 ನಲ್ಲಿ ಭಾರತ ಮಾಡಿದ ಬದ್ಧತೆಗಳನ್ನು ಪೂರೈಸಲು ದೇಶವು ಯೋಜನೆಯನ್ನು ರೂಪಿಸುತ್ತಿದ್ದು, ಅದರ ಸಲುವಾಗಿ ಹೊಸ ಕಲ್ಲಿದ್ದಲು (Coal) ಆಧಾರಿತ ವಿದ್ಯುತ್ ಘಟಕಗಳನ್ನು ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಭಾರತ ಪರಿಗಣಿಸುತ್ತಿದೆ.
ರಾಷ್ಟ್ರೀಯ ವಿದ್ಯುತ್ ನೀತಿಯನ್ನು (National Electricity Policy – NEP) ನವೀಕರಿಸಲು ಕೇಂದ್ರ ವಿದ್ಯುತ್ ಸಚಿವಾಲಯವು ನಿಯೋಜಿಸಿದ ತಜ್ಞರ ಸಮಿತಿಯು ಯಾವುದೇ ಹೊಸ ಕಲ್ಲಿದ್ದಲು ಆಧಾರಿತ ಸಾಮರ್ಥ್ಯವನ್ನು ಪರಿಗಣಿಸಬಾರದು ಎಂದು ಶಿಫಾರಸು ಮಾಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅದರ ಸಲಹೆಗಳ ಪ್ರಕಾರ, “ಯೋಜಿತ ಬೇಡಿಕೆಯನ್ನು ಪರ್ಯಾಯ ಪಳೆಯುಳಿಕೇತರ ಇಂಧನ ಮೂಲಗಳಿಂದ ಪೂರೈಸಲು ಕಾರ್ಯಸಾಧ್ಯವಲ್ಲ ಎಂದು ದೃಢಪಡಿಸಿದಾಗ ಮಾತ್ರ ಹಳೆಯ ಕಲ್ಲಿದ್ದಲು ಘಟಕಗಳ ಬದಲಿಯನ್ನು ಕಾರ್ಯಗತಗೊಳಿಸಬೇಕು” ಎಂದು ಸೂಚಿಸಿದೆ.
ಕಳೆದ ನವೆಂಬರ್ ತಿಂಗಳು ಗ್ಲಾಸ್ಗೋದಲ್ಲಿ (Glasgow, Scotland, United Kingdom) ನಡೆದ ಯುಎನ್ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ COP26 ನಲ್ಲಿ, ಪ್ರಧಾನಿ ನರೇಂದ್ರ ಮೋದಿ (Prime Minister of India – Narendra Modi) ಅವರು 2070 ರ ವೇಳೆಗೆ Net-Zero Emission ಸಾಧಿಸುವ ಭಾರತದ ಗುರಿಯನ್ನು ಘೋಷಿಸಿದ್ದರು ಮತ್ತು 2030ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ 500 GW ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಪ್ರತಿಜ್ಞೆ ಮಾಡಿದ್ದರು.