
Mandya: ರಾಜ್ಯದ ಪ್ರಮುಖ ಜಲಾಶಯವಾಗಿರುವ ಕನ್ನಂಬಾಡಿ ಅಣೆಕಟ್ಟು (ಕೆಆರ್‌ಎಸ್) ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಅವರ ತಂಡ ಶ್ರೀರಂಗಪಟ್ಟಣದಲ್ಲಿ KRS ಜಲಾಶಯಕ್ಕೆ ಬಾಗಿನ ಅರ್ಪಿಸಿ ಕಾವೇರಿ ತಾಯಿಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯಮಂತ್ರಿ ಮಾತನಾಡಿ, ನಮ್ಮ ಸರ್ಕಾರ ಬಂದ ನಂತರ ನೀರಾವರಿ ಇಲಾಖೆಗೆ ₹25,000 ಕೋಟಿ ಅನುದಾನ ನೀಡಿದೆ. ರೈತರಿಗೆ ಪಂಪ್ ಸೆಟ್ ಸಬ್ಸಿಡಿಗೆ ವರ್ಷಕ್ಕೆ ₹19,000 ಕೋಟಿ ನೀಡಲಾಗಿದೆ ಎಂದರು. ಕೆಆರ್‌ಎಸ್ ಅಣೆಕಟ್ಟು 93 ವರ್ಷಗಳ ಇತಿಹಾಸದಲ್ಲಿ 76 ಬಾರಿ ಭರ್ತಿಯಾಗಿದೆ. ಈ ಬಾರಿ ಜೂನ್ ತಿಂಗಳಲ್ಲಿ ಭರ್ತಿ ಆಗಿರುವುದು 92 ವರ್ಷಗಳ ಬಳಿಕ ಇದೇ ಮೊದಲ ಬಾರಿ.
2023-24ರಲ್ಲಿ ಬರಗಾಲ ಇದ್ದದ್ದರಿಂದ ಸಿಎಂ ಕಾಲುಗುಣ ಸರಿಯಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ-ಬೆಳೆ ಚೆನ್ನಾಗಿದೆ. ಪ್ರಕೃತಿಯ ನಿಯಮದಂತೆ ಎಲ್ಲವೂ ನಡೆಯುತ್ತದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾವೇರಿ ನದಿಯ ಜಲಾನಯನ ಪ್ರದೇಶ ಅಭಿವೃದ್ಧಿಗೆ ₹3,000 ಕೋಟಿ ಕೊಟ್ಟಿದ್ದೇವೆ. ತಾಯಿ ಕಾವೇರಿ ಹಾಗೂ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿದೆ. ಎಲ್ಲಾ ಜಲಾಶಯಗಳು ತುಂಬಿದ್ದು, ಕಾಲುವೆಗಳಿಗೆ ತಕ್ಷಣ ನೀರು ಹರಿಸಲು ಸೂಚನೆ ನೀಡಲಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಕಾವೇರಿ ತುಂಬಿದ್ದು ರೈತರು ನಗುತ್ತಿದ್ದಾರೆ. ಮೈಸೂರು ರಾಜಮಾತೆ ತಮ್ಮ ಆಭರಣಗಳನ್ನು ಕೊಟ್ಟು ಈ ಅಣೆಕಟ್ಟಿಗೆ ಸಹಾಯ ಮಾಡಿದ್ದಾರೆ. ಕಾವೇರಿ ನಮ್ಮೆಲ್ಲರ ಜೀವಧಾರೆ. ಈ ಕೆಆರ್‌ಎಸ್ ತುಂಬಿದರೆ ಸಂತೃಪ್ತಿಯ ಧಾರೆ ಎಂದರು.
ಸಚಿವ ಎನ್. ಚೆಲುವರಾಯಸ್ವಾಮಿ ಮಾತನಾಡಿ, ನಮ್ಮ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಆದರೆ ಅದನ್ನು ಬಹಿರಂಗಪಡಿಸುವಲ್ಲಿ ಹಿಂದುಳಿದಿದೆ. ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರು ಹಣದ ಕೊರತೆಯಾಗುತ್ತದೆ ಎಂದರು. ಆದರೆ ಯಾವುದೇ ಸಮಸ್ಯೆ ಉಂಟಾಗಿಲ್ಲ, ಯೋಜನೆ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಸಚಿವರು, ಶಾಸಕರು, ಸಂಸದರು, ಜಿಲ್ಲಾ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.