
Delhi: ಕೋಚಿಂಗ್ ಸೆಂಟರ್‌ಗಳು (Coaching Centre) ಅಭ್ಯರ್ಥಿಗಳಿಗೆ ಸೂಕ್ತವಾದ ಶಿಕ್ಷಣ ಮತ್ತು ಸೇವೆಗಳನ್ನು ನೀಡದೆ, ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ (DoCA) ಚುರುಕುಗೊಂಡಿದೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ದೂರು ಸಲ್ಲಿಸಿದ್ದರು, ಅವರಿಗಾಗಿ ಸರ್ಕಾರ ಮಧ್ಯಸ್ಥಿಕೆಯಿಂದ ಪರಿಹಾರ ಒದಗಿಸಿದೆ.
ಇತ್ತೀಚಿನ ದಿನಗಳಲ್ಲಿ ನಾಗರಿಕ ಸೇವೆ, ಇಂಜಿನಿಯರಿಂಗ್, ಮತ್ತು ಇತರ ಉನ್ನತ ಶಿಕ್ಷಣ ತರಬೇತಿ ಕೇಂದ್ರಗಳು, ಶುಲ್ಕವನ್ನು ವಸೂಲಿ ಮಾಡಿದ ಬಳಿಕ ಸೀಟ್ ನಿರಾಕರಿಸುವ ಅಥವಾ ಸೂಕ್ತವಾದ ತರಗತಿಗಳನ್ನು ನೀಡದೆ ವಿದ್ಯಾರ್ಥಿಗಳನ್ನು ಮೋಸಗೊಳಿಸುವ ದೂರುಗಳು ಹೆಚ್ಚಿವೆ. ಈ ಪ್ರಕರಣಗಳನ್ನು ಗಮನಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ, NCH ಈ ಅನ್ಯಾಯಗಳಿಗೆ ತಕ್ಷಣವೇ ಪರಿಹಾರ ನೀಡಲು ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ನೀಡದ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಂಡು, 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು 1.56 ಕೋಟಿ ರೂ. ಪರಿಹಾರ ವಹಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೋಚಿಂಗ್ ಸೆಂಟರ್‌ಗಳಿಗೆ ಕಡ್ಡಾಯ ನಿರ್ದೇಶನ
- ತರಬೇತಿ ಕೇಂದ್ರಗಳು ವಿದ್ಯಾರ್ಥಿ ಕೇಂದ್ರಿತ ನೀತಿಗಳನ್ನು ಅನುಸರಿಸಬೇಕು.
- ವಿದ್ಯಾರ್ಥಿಗಳಿಗೆ ನ್ಯಾಯಸಮ್ಮತ ಮರುಪಾವತಿ ನೀಡುವಂತೆ ಕಡ್ಡಾಯ ನಿಯಮವಿದ್ದು, ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರತಿಯೊಬ್ಬ ವಿದ್ಯಾರ್ಥಿಯ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪಾರದರ್ಶಕ ಮರುಪಾವತಿ ನೀತಿಯು ಅನಿವಾರ್ಯ.
ವಿವಿಧ ರಾಜ್ಯಗಳಿಂದ ಬಂದ ದೂರುಗಳು
- ತಮಿಳುನಾಡು: ಹಾಸ್ಟೆಲ್ ಸೌಲಭ್ಯ ಹೊಂದಿದ್ದರೂ ಸರಿಯಾದ ಸೇವೆ ನೀಡದೆ ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗಿದೆ.
- ಗುಜರಾತ್: ಸೀಟು ಖಾಲಿ ಇದೆ ಎಂದು ಮೋಸಗೊಳಿಸಿ, ಪಾವತಿ ನಂತರ ನಿರಾಕರಿಸಲಾಗಿದೆ.
- ಜಾರ್ಖಂಡ್: JEE ಕೋರ್ಸ್‌ಗಾಗಿ ಪಾವತಿ ಮಾಡಿದರೂ, ಸಂಸ್ಥೆಯು ಅದನ್ನು ಒಪ್ಪಿಕೊಳ್ಳಲಿಲ್ಲ. NCH ಮಧ್ಯಸ್ಥಿಕೆಯಿಂದ ಪರಿಹಾರ ದೊರಕಿತು.
ಇಂತಹ ಅನೇಕ ಪ್ರಕರಣಗಳಲ್ಲಿ NCH ವಿದ್ಯಾರ್ಥಿಗಳ ಪರ ನಿಂತಿದ್ದು, ಅನ್ಯಾಯಕ್ಕೊಳಗಾದವರಿಗೆ ತಕ್ಷಣವೇ ಪರಿಹಾರ ಒದಗಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಕೋಚಿಂಗ್ ಸೆಂಟರ್‌ಗಳು ಯಾವುದೇ ರೀತಿಯ ವಂಚನೆ ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿದೆ.