ಕರ್ನಾಟಕದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ ಮತ್ತು ರಾಜ್ಯದ ಗುಪ್ತಚರ ಇಲಾಖೆ ಅವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಡ್ರಗ್ಸ್ ಮತ್ತು ಭಯೋತ್ಪಾದಕರನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರ (Congress government) ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೈತಿಕತೆಯನ್ನು ಕಳೆದುಕೊಂಡಿದೆ. ಅವರು ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ಡೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪೋಲೀಸರು ಅಪರಾಧಿಗಳನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ,” ಎಂದು ಹೇಳಿದ್ದಾರೆ.
ಬೊಮ್ಮಾಯಿ ಅವರು ಉದಾಹರಣೆಯಾಗಿ, ಮಹಾರಾಷ್ಟ್ರದ ಪೊಲೀಸರು ಮೈಸೂರಿನಲ್ಲಿ 394 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು ಎಂದು ಹೇಳಿದರು. ಆದರೆ ಕರ್ನಾಟಕದ ಗೃಹ ಸಚಿವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ಅವರು ಟೀಕಿಸಿದ್ದಾರೆ.
ಅಲ್ಲದೆ, ಗುಜರಾತ್ ಎಟಿಎಸ್ ತಂಡ ಭಾರತದ ಆಲ್ ಖೈದಾ ಸದಸ್ಯೆಯೊಬ್ಬಳನ್ನು ಬಂಧಿಸಿದೆ. ಆಕೆ ಪಾಕಿಸ್ತಾನದಿಂದ ಸಂಘಟನೆಗೆ ಸದಸ್ಯರನ್ನು ಸೇರಿಸುತ್ತಿದ್ದಳು. ಈ ಘಟನೆಗಳನ್ನು ಉಲ್ಲೇಖಿಸಿ ಬೊಮ್ಮಾಯಿ, “ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ?” ಎಂಬ ಪ್ರಶ್ನೆ ಎತ್ತಿದ್ದಾರೆ. ಇಂತಹ ವಿಫಲತೆಯ ಜವಾಬ್ದಾರಿ ಗೃಹ ಇಲಾಖೆ ಮತ್ತು ಸರ್ಕಾರದ ಮೇಲೆ ಇದೆ ಎಂದು ಅವರು ಹೇಳಿದರು.