Sangama, Ramanagara : Covid-19 ನಿರ್ಬಂಧಗಳು ಹಾಗೂ BJPಯ ವಿರೋಧದ ನಡುವೆಯೂ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು (Mekedatu Project) ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕದಲ್ಲಿ Congress ಪಕ್ಷವು ಭಾನುವಾರ 10 ದಿನಗಳ ಪಾದಯಾತ್ರೆಗೆ (Padayatra) ಚಾಲನೆ ನೀಡಿತು.
100 Km ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ (Kanakapura Taluk) ಸಂಗಮಕ್ಕೆ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಸ್ಥಳೀಯ ಮಟ್ಟದ ಕಾಂಗ್ರೆಸ್ ನಾಯಕರನ್ನೊಳಗೊಂಡು ಸಾವಿರಾರು ಜನರು ಹರಿದು ಬಂದಿದ್ದರು.
ಪಾದಯಾತ್ರೆ ಬೆಳಿಗ್ಗೆ 11.30ಕ್ಕೆ ಆರಂಭಗೊಂಡಿತು. ಸುಡುವ ಬಿಸಿಲಿನ ಹಾದಿಯಲ್ಲಿ ಕಾಂಗ್ರೆಸ್ ನಾಯಕರು ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ಡಿ.ಕೆ. ಶಿವಕುಮಾರ್ (D. K. Shivakumar) ಜೊತೆಗೆ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಜಿ. ಪರಮೇಶ್ವರ, ಡಿ.ಕೆ. ಸುರೇಶ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಸಿದ್ದರಾಮಯ್ಯ (Siddaramaiah) ಅವರು ತಮ್ಮ ಪಾದಯಾತ್ರೆ ಆರಂಭಿಸಿದ್ದರೂ, ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ತೆರಳಬೇಕಾಯಿತು ಎಂದು ವರದಿಗಳು ತಿಳಿಸಿವೆ.
7 Km ಕ್ರಮಿಸಿ ಹೆಗ್ಗನೂರು (Hegganuru) ತಲುಪಿದ ಪಾದಯಾತ್ರಿಗಳು ಉಪಹಾರ, ವಿಶ್ರಾಂತಿ ಪಡೆದರು. ಸಂಜೆ 5 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಗೊಂಡು ರಾತ್ರಿ ವೇಳೆಗೆ ಪಾದಯಾತ್ರೆ ಡಿ.ಕೆ. ಶಿವಕುಮಾರ್ ಅವರ ತವರೂರು ದೊಡ್ಡಾಲಹಳ್ಳಿ (Doddalahalli) ತಲುಪಿತು. ಗ್ರಾಮಸ್ಥರು ಪಾದಯಾತ್ರಿಗಳನ್ನು ಪುಷ್ಪಾರ್ಚನೆ, ಪೂರ್ಣಕುಂಭದೊಂದಿಗೆ ಭವ್ಯ ಸ್ವಾಗತ ಕೋರಿದರು. 14 Km ಕ್ರಿಮಿಸಿ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಂಡಿತು.
ಪಾದಯಾತ್ರೆ ನಿಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿ KPCC ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ಪಾದಯಾತ್ರೆ ವೇಳೆ ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯಲಿಲ್ಲ.