
Bengaluru: “ನಾನು ಹುಟ್ಟಿನಿಂದಲೇ ಅಪ್ಪಟ ಕಾಂಗ್ರೆಸಿಗ. ಜೀವ ಇರುವ ತನಕವೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನನ್ನ ಜೀವ, ರಕ್ತ ಎಲ್ಲವೂ ಕಾಂಗ್ರೆಸ್‌ಗೇ ಸೇರಿವೆ. ಪಕ್ಷವನ್ನು ಮುನ್ನಡೆಸುತ್ತೇನೆ, ಆಧಾರಸ್ತಂಭವಾಗುತ್ತೇನೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದರಿಂದ ನಾನು ಬಿಜೆಪಿ ಅಥವಾ ಆರ್ಎಸ್ಎಸ್‌ಗೆ ಕೈಜೋಡಿಸುತ್ತೇನೆ ಎಂಬ ಮಾತು ಬರುತ್ತಿದೆ. ಆದರೆ ನೇರವಾಗಲಿ, ಪರೋಕ್ಷವಾಗಲಿ, ಅವರ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ನಾನು ಕೇವಲ ಕಾಂಗ್ರೆಸ್‌ನವನಾಗಿದ್ದೇನೆ” ಎಂದರು.
ಅವರು ಮುಂದುವರಿಸಿ, “ನಾನು ಎಲ್ಲಾ ರಾಜಕೀಯ ಪಕ್ಷಗಳ ಬಗ್ಗೆಯೂ ಸಂಶೋಧನೆ ಮಾಡಿದ್ದೇನೆ. ಆರ್ಎಸ್ಎಸ್ ರಾಜ್ಯದಾದ್ಯಂತ ಹೇಗೆ ಸಂಘಟನೆ ಬಲಪಡಿಸಿದೆ ಎನ್ನುವುದನ್ನು ತಿಳಿದಿದ್ದೇನೆ. ಅವರು ಶಾಲಾ-ಕಾಲೇಜುಗಳ ಮೂಲಕ ಮಕ್ಕಳನ್ನು ತಲುಪುತ್ತಿದ್ದಾರೆ. ಹಣ ಹೂಡುತ್ತಿದ್ದಾರೆ. ಆದರೆ ರಾಜಕೀಯವಾಗಿ ನಾವು ಭಿನ್ನಾಭಿಪ್ರಾಯ ಹೊಂದಿದ್ದೇವೆ,” ಎಂದು ಹೇಳಿದರು.
“ಯಾವುದೇ ಸಂಸ್ಥೆಯಲ್ಲಿಯೂ ಒಳ್ಳೆಯ ಗುಣಗಳಿರುತ್ತವೆ. ಅವನ್ನು ಗುರುತಿಸುವುದು ನಮ್ಮ ಗುಣ. ಮಾಧ್ಯಮದಲ್ಲೂ ಒಂದೊಂದು ಗುಣಗಳಿವೆ. ಅದೇ ರೀತಿ ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸುವುದು ಸಹ ಮುಖ್ಯ,” ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಬಿಜೆಪಿಯವರು ಧರ್ಮಸ್ಥಳ ಯಾತ್ರೆ ನಡೆಸುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಬಿಜೆಪಿ ಒಂದು ಠುಸ್ ಗಿರಾಕಿ. ಅವರು ಮಾಡುತ್ತಿರುವುದು ಕೇವಲ ರಾಜಕಾರಣ. ತನಿಖಾ ತಂಡ ತನ್ನ ಕೆಲಸವನ್ನು ಶಿಸ್ತುಬದ್ಧವಾಗಿ ಮಾಡುತ್ತಿದೆ,” ಎಂದು ಹೇಳಿದರು.
“ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು ಒಳಗೆ ಹಾಕಲಾಗಿದೆ. ಯಾರ ಮೇಲಾದರೂ ಆರೋಪ ಮಾಡಬೇಕಾದರೆ ದಾಖಲೆ ಬೇಕು. ಸುಳ್ಳು ಆರೋಪ ಯಾರ ಮೇಲಾದರೂ ಮಾಡಬಹುದು. ಆದರೆ ಅದು ನಾಳೆ ನಮ್ಮ ಮೇಲೂ ಬಂದು ಬೀಳಬಹುದು. ಆದ್ದರಿಂದ ರಾಜಕೀಯ ಆರೋಪ ಮಾಡಿದರೂ ಆಧಾರವಿಟ್ಟು ಮಾಡಬೇಕು,” ಎಂದು ಡಿಸಿಎಂ ಸ್ಪಷ್ಟಪಡಿಸಿದರು.