Bengaluru: ಕೆಲಸದ ಸಮಯವನ್ನು 8 ಗಂಟೆಯಿಂದ 10 ಗಂಟೆಗೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ (State Government) ಪ್ರಸ್ತಾವನೆ ಕಳುಹಿಸಿದೆ. ಆದರೆ ಈ ಪ್ರಸ್ತಾವನೆಗೆ ಕರ್ನಾಟಕದಲ್ಲಿ ಕಾರ್ಮಿಕ ಸಂಘಟನೆಗಳು ಗಟ್ಟಿಯಾಗಿ ವಿರೋಧ ವ್ಯಕ್ತಪಡಿಸಿವೆ.
ಇದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸರ್ಕಾರ ಕಾರ್ಮಿಕ ಸಂಘಟನೆಗಳು ಹಾಗೂ ಕೈಗಾರಿಕಾ ಪ್ರತಿನಿಧಿಗಳ ಜೊತೆ ಹಲವಾರು ಸಭೆ ನಡೆಸಿದೆ. ಕೈಗಾರಿಕೋದ್ಯಮಗಳು ಈ ಯೋಜನೆಗೆ ತಕ್ಷಣ ವಿರೋಧಿಸದಿದ್ದರೂ, ಕಾರ್ಮಿಕ ಸಂಘಟನೆಗಳು ಖಡಕ್ ವಿರೋಧ ವ್ಯಕ್ತಪಡಿಸಿದ್ದವು.
ಕಾರ್ಮಿಕ ಇಲಾಖೆ ಇತ್ತೀಚೆಗೆ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ – “ಕಾರ್ಮಿಕರ ಮೇಲೆ ಒತ್ತಡ ಹೇರಿಸಿ 10 ಗಂಟೆಗಳ ಕೆಲಸ ಮಾಡಿಸಬೇಡಿ” ಎಂದು. ಕಾರ್ಮಿಕರ ಒಪ್ಪಿಗೆ ಇಲ್ಲದೆ ಕೆಲಸದ ಸಮಯ ವಿಸ್ತರಣೆಗೆ ಅವಕಾಶ ಇರುವುದಿಲ್ಲ ಎಂದೂ ಇಲಾಖೆ ತಿಳಿಸಿದೆ.
“ಕೆಂದ್ರದ ಪ್ರಸ್ತಾವನೆಯಲ್ಲಿ 9-10 ಗಂಟೆ ಕೆಲಸದ ಕುರಿತಾಗಿ ಮಾತು ಬಂದಿತ್ತು. ನಾವು ಟ್ರೇಡ್ ಯೂನಿಯನ್ ಮತ್ತು ಉದ್ಯಮಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಕಾರ್ಮಿಕರು ಒಪ್ಪಿದರೆ ವಾರದಲ್ಲಿ 2 ರಜೆ ನೀಡಿ ಕೆಲಸದ ಅವಧಿ ವಿಸ್ತರಿಸಬಹುದು. ಆದರೆ, ಕಾರ್ಮಿಕರು ಒಪ್ಪದಿದ್ದರೆ ಅಂತಹ ಅನುಮತಿ ನೀಡುವುದಿಲ್ಲ. ನನ್ನ ಅಭಿಪ್ರಾಯವೂ ಈ ವಿಸ್ತರಣೆಗೆ ವಿರೋಧವಾಗಿದೆ,” ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಹೊಸ ನಿಯಮಗಳ ನಿರ್ಧಾರ
- ಕಾರ್ಮಿಕರ ಹಿತದೃಷ್ಟಿಯಿಂದ ಕೆಲ ಮಾನದಂಡಗಳನ್ನು ತರಲು ರಾಜ್ಯ ನಿರ್ಧಾರ ತೆಗೆದುಕೊಂಡಿದೆ,
- ಕಾರ್ಮಿಕರು ಒಪ್ಪಿಗೆ ಪತ್ರ ಕೊಟ್ಟರೆ ಮಾತ್ರ 10 ಗಂಟೆ ಕೆಲಸ ಮಾಡಿಸಬಹುದು.
- ಒತ್ತಡ ಹೇರಿಸಿ ಕೆಲಸ ಮಾಡಿಸುವಂತಿಲ್ಲ.
- ಯಾವುದೇ ತೊಂದರೆ ನೀಡಿದರೆ ಕಾರ್ಮಿಕರು ನೇರವಾಗಿ ದೂರು ನೀಡಬಹುದು.
- ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡುತ್ತಾರೆ.
ರಾಜ್ಯ ಸರ್ಕಾರ ಇನ್ನೂ ಕೇಂದ್ರದ ಪ್ರಸ್ತಾವನೆಗೆ ಪರ ಅಥವಾ ವಿರೋಧ ಹೇಳಿಲ್ಲ. ಆದರೆ, ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಬೇಕಾದರೆ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಕೈಗಾರಿಕೋದ್ಯಮ ಒತ್ತಡಕ್ಕೆ ಮಣಿಯುತ್ತದೆಯಾ ಅಥವಾ ಕಾರ್ಮಿಕರ ಪರ ನಿಲ್ಲುತ್ತದೆಯಾ ಎಂಬುದು ಮಹತ್ವದ ಪ್ರಶ್ನೆ.