12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ (Basavanna) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagouda Patil Yatnal) ವಿರುದ್ಧ ರಾಜ್ಯದ ವಿವಿಧ ಸಂಘಟನೆಗಳು ಕಿಡಿಕಾರುತ್ತಿದ್ದು, ಪ್ರತಿಭಟನೆ ನಡೆಸುತ್ತಿವೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಯತ್ನಾಳ್ ವಿರುದ್ಧ ಗಂಭೀರವಾಗಿ ಪ್ರತಿಕ್ರಿಯಿಸಿ, “ಯತ್ನಾಳ್ ಅವರ ಹೇಳಿಕೆ, ಬಸವಣ್ಣನವರಿಗೆ ಅಲ್ಲ, ಅವರ ಜನ್ಮಸ್ಥಳ ವಿಜಯಪುರದ ಜನರಿಗೆ ಕೂಡ ಅವಮಾನಕರವಾಗಿದೆ,” ಎಂದು ಹೇಳಿದ್ದಾರೆ. ಬಸವಣ್ಣನವರ ಪರಂಪರೆಯನ್ನು ಗೌರವಿಸುವ ಯಾವುದೇ ವ್ಯಕ್ತಿ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಮುಲ್ಲಾ ಅವರು ಹೇಳಿದರು.
ಯತ್ನಾಳ್ ಅವರು ಬೇಷರತ್ ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಯತ್ನಾಳ್ ಅವರ ವರ್ತನೆ ಅರೆಬರೆ ಮನೋಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಕಡೆಯಿಂದ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಸಂಘಟನೆಗಳು ಅಭಿಪ್ರಾಯ ಪಟ್ಟಿವೆ. ಬಸವಣ್ಣನ ಹೆಸರಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಯತ್ನಾಳ್ ಅವರು ಮೊದಲು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.
ಯತ್ನಾಳ್ ಅವರ ಹೇಳಿಕೆಗಳಿಂದ ವಿಜಯಪುರ ಜಿಲ್ಲೆಗೆ ರಾಜ್ಯದ ಇತರ ಪ್ರದೇಶಗಳಲ್ಲಿ ಕೆಟ್ಟ ಹೆಸರು ಬರುತ್ತಿದೆ. “ನಾವು ವಿಜಯಪುರದವರು ಎಂದು ಹೆಮ್ಮೆ ಪಡುವ ಬದಲು ನಾಚಿಕೆ ಪಡುವ ಸ್ಥಿತಿ ಉಂಟಾಗಿದೆ,” ಎಂದು ಮುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಈ ವಿವಾದ ರಾಜ್ಯದ ರಾಜಕೀಯ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ.