
Bengaluru: ನಿಗಮ ಮಂಡಳಿಯ ಖಾಲಿ ಹುದ್ದೆಗಳನ್ನು ಮುಂದಿನ 10 ದಿನಗಳಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, “ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಖಾಲಿ ಇರುವ ಸ್ಥಾನಗಳನ್ನು ತುಂಬಬೇಕಿದೆ. ಮುಂದೆ ಹತ್ತು ದಿನಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸುರ್ಜೇವಾಲ ಮತ್ತೆ ಬೆಂಗಳೂರಿಗೆ ಬರುವರು. ಅವರು ಸಚಿವರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ನೇಮಕಾತಿ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ,” ಎಂದರು.
ಇಂದು ಕೃಷ್ಣಾ ಭಾಗ್ಯ ಜಲನಿಗಮದ ಬಗ್ಗೆ ಚರ್ಚೆ ನಡೆದಿದೆ. “ರೇವಣ ಸಿದ್ದೇಶ್ವರ ಯೋಜನೆಗೆ ಭೂಮಿ ಪೂಜೆ ಮಾಡಲಿದ್ದೇವೆ. ಈ ಯೋಜನೆಯ ವೆಚ್ಚ ಸುಮಾರು 2,000 ಕೋಟಿ ರೂ. ಆಗಿದೆ. ಮೊದಲು ಟೆಂಡರ್ ಕರೆಯಲಾಗಿದೆ. ಬೋರ್ಡ್ ಅನುಮೋದನೆಯ ಬಳಿಕ ಭೂಮಿ ಪೂಜೆ ನಡೆಯಲಿದೆ,” ಎಂದು ಅವರು ತಿಳಿಸಿದರು.
ದೆಹಲಿಗೆ ಭೇಟಿ ನೀಡಿ ಬಂದ ಬಳಿಕ, ಕೃಷ್ಣಾ, ಎತ್ತಿನಹೊಳೆ, ಕಳಸಬಂಡೂರಿ ಮತ್ತು ಮೇಕೆದಾಟು ಯೋಜನೆಗಳ ಕುರಿತು ಚರ್ಚಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.