Bengaluru: ಕರ್ನಾಟಕ ಲೋಕಾಯುಕ್ತ ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ಪ್ರಕಾರ, ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳೇ ಆರೋಪಿಗಳಾಗಿ ಸಾಬೀತಾಗಿದ್ದಾರೆ. ಬೆಂಗಳೂರು ನಗರ ಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ (IPS Srinath Joshi) ಹಾಗೂ ಕಾನ್ಸ್ಟೇಬಲ್ ನಿಂಗಪ್ಪ ಅವರು ಸರ್ಕಾರದ ಇತರೆ ಇಲಾಖೆಗಳ ಅಧಿಕಾರಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ದೃಢಪಟ್ಟಿದೆ.
ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಅಬಕಾರಿ ಮತ್ತು ಬಿಬಿಎಂಪಿ ಅಧಿಕಾರಿಗಳಿಂದ ಹಣ ಪಡೆದಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಸಂಸ್ಥೆ ತನ್ನ ಪೊಲೀಸ್ ವಿಭಾಗದ ಮೂಲಕ ತನಿಖೆ ನಡೆಸಿತ್ತು. ತನಿಖೆಯಲ್ಲಿ ಶ್ರೀನಾಥ್ ಜೋಷಿ ಹಾಗೂ ನಿಂಗಪ್ಪ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಶ್ರೀನಾಥ್ ಜೋಷಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಪ್ರಕರಣ ಸಂಬಂಧ ಕಾನ್ಸ್ಟೇಬಲ್ ನಿಂಗಪ್ಪನನ್ನು ಬಂಧಿಸಲಾಗಿದೆ. ಅವನು ‘‘ಕೆಜಿ’’ ಎಂಬ ಕೋಡ್ ವರ್ಡ್ ಬಳಸಿ ಅಧಿಕಾರಿಗಳನ್ನು ಬೆದರಿಸಿ ಹಣ ಪಡೆದುಕೊಂಡಿದ್ದನು ಎಂಬುದೂ ತಿಳಿದುಬಂದಿದೆ.
ಲೋಕಾಯುಕ್ತ ತನಿಖೆಯಲ್ಲಿ, ನಿಂಗಪ್ಪ 4.92 ಕೋಟಿ ರೂ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದ ಮಾಹಿತಿ ಕೂಡ ಹೊರಬಿದ್ದಿದೆ. ತನಿಖೆ ವೇಳೆ ನಿಂಗಪ್ಪ ಮತ್ತು ಶ್ರೀನಾಥ್ ಜೋಷಿ ವಾಟ್ಸ್ಆ್ಯಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಿದ್ದರು ಎಂಬ ಸಾಕ್ಷ್ಯಗಳು ಸಿಕ್ಕಿದ್ದು, ಈ ವಿವರಗಳನ್ನೆಲ್ಲಾ ಸರ್ಕಾರಕ್ಕೆ ಒದಗಿಸಲಾಗಿದೆ.
ಇದರ ಆಧಾರವಾಗಿ ಶ್ರೀನಾಥ್ ಜೋಷಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.