Beijing (China): ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಲಂಚಕೋರ ಅಧಿಕಾರಿಗಳು, ರಾಜಕೀಯ ನಾಯಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗೆ, ಮಾಜಿ ಕೃಷಿ ಸಚಿವ ಹಾಗೂ ಗನ್ಸು ಪ್ರಾಂತ್ಯದ ಗವರ್ನರ್ ಟ್ಯಾಂಗ್ ರೆಂಜಿಯಾನ್ ಲಂಚ ಪಡೆದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿದ್ದಾರೆ.
ಟ್ಯಾಂಗ್ ರೆಂಜಿಯಾನ್ 38 ಮಿಲಿಯನ್ ಡಾಲರ್ ಲಂಚ ಪಡೆದ ಆರೋಪ ಸಾಬೀತಾಗಿದೆ. ಭಾರೀ ಭ್ರಷ್ಟಾಚಾರದ ಆರೋಪದ ಮೇಲೆ, ಚೀನಾದ ನ್ಯಾಯಾಲಯವು ಅವರಿಗೆ ಮರಣದಂಡನೆ ಘೋಷಿಸಿದೆ.
ನ್ಯಾಯಾಲಯ ತಿಳಿಸಿದ್ದಂತೆ, ಟ್ಯಾಂಗ್ ಅವರ ಎಲ್ಲಾ ವೈಯಕ್ತಿಕ ಆಸ್ತಿಯನ್ನು ವಶಪಡಿಸಬೇಕು ಮತ್ತು ಲಂಚವಾಗಿ ಪಡೆದ ಹಣವನ್ನು ರಾಷ್ಟ್ರೀಯ ಖಜಾನೆಗೆ ವರ್ಗಾಯಿಸಬೇಕು. 2007 ರಿಂದ 2024ರ ನಡುವೆ ಟ್ಯಾಂಗ್ 268 ಮಿಲಿಯನ್ ಯುವಾನ್ (ಸುಮಾರು 38 ಮಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಲಂಚವಾಗಿ ಪಡೆದಿದ್ದಾರೆ.
ಕೋರ್ಟ್ ವಿಚಾರಣೆಯಲ್ಲಿ, ಟ್ಯಾಂಗ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಆದರೆ, ನ್ಯಾಯಾಲಯ ಅವರ ತಪ್ಪನ್ನು ಕ್ಷಮಿಸದೆ, ಜನರ ಹಿತಾಸಕ್ತಿಗೆ ಹಾನಿ ಮಾಡುವ ಅಪರಾಧಗಳು ಮರಣದಂಡನೆಗೆ ಯೋಗ್ಯವೆಂದು ತೀರ್ಪು ನೀಡಿದೆ.
2012 ರಲ್ಲಿ ಕ್ಸಿ ಜಿನ್ಪಿಂಗ್ ಅಧಿಕಾರಕ್ಕೆ ಬಂದ ನಂತರ, ಚೀನಾ ಕಮ್ಯುನಿಸ್ಟ್ ಪಕ್ಷವು ಭ್ರಷ್ಟಾಚಾರದ ವಿರುದ್ಧ ದೊಡ್ಡ ಅಭಿಯಾನ ಆರಂಭಿಸಿದೆ. ಇದರಲ್ಲಿ ಒಂದು ಮಿಲಿಯನ್ ಕ್ಕಿಂತ ಹೆಚ್ಚು ಅಧಿಕಾರಿಗಳು ಶಿಕ್ಷೆ ಅಥವಾ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದಾರೆ, ಉನ್ನತ ಮಿಲಿಟರಿ ಅಧಿಕಾರಿಗಳೂ ಸೇರಿದ್ದಾರೆ. ಟ್ಯಾಂಗ್ ಅವರನ್ನು 2024 ರ ನವೆಂಬರ್‌ನಲ್ಲಿ ಪಕ್ಷದಿಂದ ಉಚ್ಚಾಟಿಸಲಾಯಿತು.







