Belagavi: ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ (Revenue and Land Survey Department) ಕೆಳ ಹಂತದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ನಿಜ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (krishna Byre gowda) ಸದನದಲ್ಲಿ ಒಪ್ಪಿಕೊಂಡಿದ್ದಾರೆ. ವಿಧಾನಪರಿಷತ್ತಿನಲ್ಲಿ ಬುಧವಾರ ಅವರು ಈ ವಿಚಾರವನ್ನು ವಿವರಿಸಿದರು.
“ಕೆಳಮಟ್ಟದಲ್ಲಿ ಭ್ರಷ್ಟಾಚಾರ ತಡೆಯುವುದು ಸುಲಭವಲ್ಲ. ಈ ಸಮಸ್ಯೆ ಹಿಂದಿನಿಂದಲೂ ಇದ್ದು, ಈಗಲೂ ಮುಂದುವರಿಯುತ್ತಿದೆ. ಆದರೆ ಅದನ್ನು ತಡೆಯಲು ಸರ್ಕಾರ ಶ್ರಮಿಸುತ್ತಿದೆ” ಎಂದು ಸಚಿವರು ಹೇಳಿದರು.
ಕಾಂಗ್ರೆಸ್ MLC ರಾಮೋಜಿಗೌಡ ಅವರು ರೈತರ ಪೋಡಿ ಪರಿಷ್ಕರಣೆ ವಿಳಂಬದ ಬಗ್ಗೆ ಪ್ರಶ್ನಿಸಿದಾಗ, ಸಚಿವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಬಿಜೆಪಿ MLC ಶಶಿಲ್ ನಮೋಶಿ ಇ-ಖಾತಾ ಬಗ್ಗೆ ಪ್ರಶ್ನಿಸಿದಾಗ, ಸಚಿವ ಕೃಷ್ಣಬೈರೇಗೌಡ, “ನಾನು ಭ್ರಷ್ಟಾಚಾರ ಬೆಂಬಲಿಸಲು ಇಲ್ಲ, ಅದನ್ನು ತಡೆಯಲು ಬಂದಿದ್ದೇನೆ. ನಕಲಿ ದಾಖಲೆಗಳ ಮೂಲಕ ನೋಂದಣಿಗೆ ಹಣ ಪಡೆಯುವುದು ಸರಿಯೇ?” ಎಂದು ಪ್ರಶ್ನೆ ತಿರುಗಿಸಿದರು.
ಇ-ಖಾತಾ ಆರಂಭದಲ್ಲಿ ಸಮಸ್ಯೆಗಳನ್ನು ಎದುರಿಸಿದರೂ, ಈಗ ಶೇ 90ರಷ್ಟು ಸಮಸ್ಯೆ ಬಗೆಹರಿದಿವೆ. ಬಿಬಿಎಂಪಿ ಇತ್ತೀಚೆಗೆ 54,000 ಇ-ಖಾತಾಗಳನ್ನು ವಿತರಿಸಿದ್ದು, ಪ್ರತಿದಿನ 3,000 ಇ-ಖಾತಾಗಳ ವಿತರಣೆ ನಡೆಯುತ್ತಿದೆ.
ಪುರಸಭೆ ಆಡಳಿತದಲ್ಲಿ ಭ್ರಷ್ಟಾಚಾರ ತಡೆಯಲು ಇ-ಖಾತಾ ವ್ಯವಸ್ಥೆ ಪರಿಣಾಮಕಾರಿ ಎನಿಸಿದೆ ಎಂದು ಸಚಿವರು ಹೇಳಿದ್ದಾರೆ.