New Delhi: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಭಾರತದ ಮೊದಲ AI ಆಧಾರಿತ ಅನುವಾದ ಆ್ಯಪ್ ಆದಿ ವಾಣಿ (Adi Vaani) ಯ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಬುಡಕಟ್ಟು ಸಮುದಾಯಗಳ ಭಾಷೆ-ಸಂಸ್ಕೃತಿಯನ್ನು ಉಳಿಸುವ ಮತ್ತು ಡಿಜಿಟಲ್ ಸಬಲೀಕರಣ ನೀಡುವ ಮಹತ್ವದ ಹೆಜ್ಜೆಯಾಗಿದೆ.
ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವಾಲಯದ ಅಧಿಕಾರಿಗಳು, ಐಐಟಿ ದೆಹಲಿಯ ತಜ್ಞರು, ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಭಾಷಾ ತಜ್ಞರು ಪಾಲ್ಗೊಂಡಿದ್ದರು.
ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ ಮಾತನಾಡಿ, “ಭಾಷೆ ಎಂದರೆ ಸಾಂಸ್ಕೃತಿಕ ಗುರುತು, ಸಮುದಾಯಗಳನ್ನು ಒಂದಾಗಿಸುವ ಸೇತುವೆ. ಆದಿ ವಾಣಿ ಆ್ಯಪ್ ಬುಡಕಟ್ಟು ಪ್ರದೇಶದ ಜನರಿಗೆ ಸೇವೆ ತಲುಪಿಸಲು ಮತ್ತು ಯುವಕರಿಗೆ ಡಿಜಿಟಲ್ ಶಕ್ತಿಕರಣ ನೀಡಲು ಸಹಾಯ ಮಾಡಲಿದೆ” ಎಂದರು.
- ಈ ಆ್ಯಪ್ ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
- ಬುಡಕಟ್ಟು ಭಾಷೆಗಳ ಸಂಗ್ರಹಿತ ದತ್ತಾಂಶ ಮತ್ತು ಆಧುನಿಕ ತಂತ್ರಜ್ಞಾನವನ್ನು ಒಟ್ಟುಗೂಡಿಸಿದೆ.
- ಸಮುದಾಯದ ಪ್ರತಿಕ್ರಿಯೆಯಿಂದ ನಿರಂತರ ಸುಧಾರಣೆ ಸಾಧ್ಯ.
- ಶಿಕ್ಷಣ, ಆರೋಗ್ಯ, ಆಡಳಿತ ಸೇವೆಗಳನ್ನು ಮಾತೃಭಾಷೆಯಲ್ಲಿ ಪಡೆಯಲು ನೆರವಾಗಲಿದೆ.
- ಅಳಿವಿನಂಚಿನಲ್ಲಿರುವ ಭಾಷೆಗಳ ಡಿಜಿಟಲೀಕರಣಕ್ಕೆ ಸಹಕಾರಿಯಾಗಲಿದೆ.
ಆದಿ ವಾಣಿ ಆ್ಯಪ್ ಅನ್ನು ಐಐಟಿ ದೆಹಲಿ ನೇತೃತ್ವದಲ್ಲಿ ಬಿಟ್ಸ್ ಪಿಲಾನಿ, ಐಐಐಟಿ ಹೈದರಾಬಾದ್, ಐಐಐಟಿ ನವ ರಾಯ್ಪುರ ಮತ್ತು ಹಲವು ರಾಜ್ಯಗಳ ಬುಡಕಟ್ಟು ಸಂಸ್ಥೆಗಳ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದೆ.
ಆದಿ ವಾಣಿ ವೆಬ್‌ಸೈಟ್ https://adivaani.tribal.gov.in ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಪ್ಲೇ ಸ್ಟೋರ್ ಹಾಗೂ iOS ಆ್ಯಪ್‌ಗಳಲ್ಲಿ ಕೂಡಾ ಲಭ್ಯವಾಗಲಿದೆ.