Washington: ಅಮೆರಿಕದಲ್ಲಿ ವಾಸವಿರುವ ವಲಸಿಗರ ಮಕ್ಕಳಿಗೆ ಜನ್ಮದತ್ತ ಪೌರತ್ವ ಸಿಗದಂತೆ ತಡೆ ಮಾಡುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ಅವರ ಆದೇಶಕ್ಕೆ ನ್ಯೂ ಹ್ಯಾಂಪ್ಶೈರ್‌ನ ಫೆಡರಲ್ ನ್ಯಾಯಾಧೀಶರು ತಡೆಯಾಜ್ಞೆ ನೀಡಿರುವುದು ಟ್ರಂಪ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಟ್ರಂಪ್ ಅವರು ಜನವರಿಯಲ್ಲಿ ಹೊರಡಿಸಿದ ಈ ಆದೇಶವು, ಅಮೆರಿಕದ ನೆಲದಲ್ಲಿ ಜನಿಸಿದರೂ ಅವರು ಪೌರತ್ವಕ್ಕೆ ಅರ್ಹರಲ್ಲ ಎನ್ನುವ ಸಂದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಗರ್ಭಿಣಿಯೊಬ್ಬರು, ಎರಡು ಕುಟುಂಬಗಳು ಮತ್ತು ಅವರ ಮಕ್ಕಳು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅವರ ಪರವಾಗಿ “ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್” (ACLU) ಸೇರಿದಂತೆ ಹಲವರು ಕಾನೂನು ಹೋರಾಟ ನಡೆಸಿದರು.
ನ್ಯಾಯಾಧೀಶರು ನೀಡಿದ ತಡೆಯಾಜ್ಞೆಯು ತಾತ್ಕಾಲಿಕವಾದ್ದಾದರೂ, ಇದರಿಂದಾಗಿ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶ ತಕ್ಷಣವೇ ಜಾರಿಯಲ್ಲಾಗುವುದಿಲ್ಲ. ನ್ಯಾಯಾಧೀಶರು ರಾಷ್ಟ್ರವ್ಯಾಪಿ ತಡೆಯಾಜ್ಞೆ ನೀಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ, ಏಕೆಂದರೆ ಜಿಲ್ಲಾ ನ್ಯಾಯಾಧೀಶರಿಗೆ ಸಾಮಾನ್ಯವಾಗಿ ಇಂತಹ ಆದೇಶ ನೀಡಲು ನಿಯಮಿತ ಅಧಿಕಾರವಿಲ್ಲ.
ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಅಲ್ಲಿ ಜನಿಸಿದ ಎಲ್ಲರಿಗೂ ಪೌರತ್ವ ನೀಡಬೇಕು ಎಂಬ ನಿಲುವಿಗೆ ಈ ತೀರ್ಪು ಬಲ ನೀಡಿದೆ. ಟ್ರಂಪ್ ಅವರು ಅಕ್ರಮ ವಲಸೆ ತಡೆಯುವ ಹೆಸರಲ್ಲಿ ಈ ಹೊಸ ನಿಯಮ ತರಲು ಮುಂದಾಗಿದ್ದರೂ, ನ್ಯಾಯಾಲಯದ ತೀರ್ಪು ಅವರ ಯೋಜನೆಗೆ ತಡೆ ತಂದಿದೆ.