New Delhi: ದೇಶದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (CP Radhakrishnan) ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರಿಂದ ರಾಧಾಕೃಷ್ಣನ್ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಧಿಕೃತವಾಗಿ ಅಲಂಕರಿಸಿದ್ದಾರೆ.
ಈ ಸಮಾರಂಭದಲ್ಲಿ ಹಲವು ಪಕ್ಷಗಳ ಹಿರಿಯ ನಾಯಕರು ಹಾಜರಾಗಿದ್ದರು, ಅವರಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಪಂಜಾಬ್ ಗವರ್ನರ್ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದ್ದಾರೆ.
NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಬುಧವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 152 ಮತಗಳ ಅಂತರದಿಂದ ಐ.ಎನ್.ಐ. (INDIA) ಕೂಟದ ಬಿ. ಸುದರ್ಶನ್ ರೆಡ್ಡಿಯನ್ನು ಸೋಲಿಸಿ ಆಯ್ಕೆಯಾಗಿದ್ದರು. ಉಪರಾಷ್ಟ್ರಪತಿ ಹುದ್ದೆಗೆ ನಡೆದ ಮತದಾನದಲ್ಲಿ ರಾಧಾಕೃಷ್ಣನ್ 452 ಮತಗಳನ್ನು ಪಡೆದುಕೊಂಡರೆ, ಎದುರಾಳಿ ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದಿದ್ದರು. ಒಟ್ಟು 781 ಸಂಸದರಲ್ಲಿ 767 ಮಂದಿ ಮತ ಚಲಾಯಿಸಿದ್ದು, ಶೇ. 98.2 ಮತದಾನವು ನಡೆದಿದ್ದು, 752 ಮತಗಳು ಮಾನ್ಯವಾಗಿದ್ದು 15 ಮತಗಳು ಅಮಾನ್ಯವಾಯಿತು.
ತಮಿಳುನಾಡಿನಿಂದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಮೂರನೇ ವ್ಯಕ್ತಿ ರಾಧಾಕೃಷ್ಣನ್. ಈ ಹಿಂದೆ ಎಸ್. ರಾಧಾಕೃಷ್ಣನ್ (1952–1962) ಮತ್ತು ಆರ್. ವೆಂಕಟರಾಮನ್ (1984–1987) ಉಪರಾಷ್ಟ್ರಪತಿಯಾಗಿದ್ದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿನ ನಂತರ ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಲಾಗಿದೆ. ಈ ಹಿನ್ನೆಲೆ ಗಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಮಹಾರಾಷ್ಟ್ರ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲು ನೇಮಕ ಆಗಿದ್ದಾರೆ.
ಪ್ರಮಾಣ ವಚನ ಸಮಾರಂಭದ ನಂತರ ಉಪರಾಷ್ಟ್ರಪತಿ ರಾಧಾಕೃಷ್ಣನ್ ಮಧ್ಯಾಹ್ನ 12:30ಕ್ಕೆ ರಾಜ್ಯಸಭೆಯ ಎಲ್ಲ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.