Moscow: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ಬುಧವಾರ ಅವರು ರಷ್ಯಾದ ಉಪ ಪ್ರಧಾನಮಂತ್ರಿ ಡೆನಿಸ್ ಮಾಂಟುರೊಸ್ ಅವರೊಂದಿಗೆ ಸಭೆ ನಡೆಸಿ, ಎರಡೂ ರಾಷ್ಟ್ರಗಳ (India-Russia) ವ್ಯಾಪಾರ ಮತ್ತು ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜೈಶಂಕರ್ ಮಾತನಾಡಿ, “ಸಂಕೀರ್ಣ ಜಾಗತಿಕ ರಾಜಕೀಯ ಸವಾಲುಗಳನ್ನು ಎದುರಿಸಲು ಭಾರತ ಮತ್ತು ರಷ್ಯಾ ಸೃಜನಾತ್ಮಕ ಹಾಗೂ ಹೊಸ ವಿಧಾನಗಳನ್ನು ಬಳಸಬೇಕು. ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ನಾವು ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಹೆಚ್ಚು ಸಾಧನೆ ಮಾಡಬೇಕು” ಎಂದು ಹೇಳಿದರು.
ಅವರು ಇನ್ನೂ ಹೇಳಿದರು: “ಕೇವಲ ಮಾತುಗಳಲ್ಲ, ನಿರ್ದಿಷ್ಟ ಗುರಿ ಮತ್ತು ಕಾಲಾವಧಿ ಹೊಂದಿಕೊಂಡು ಮುಂದಿನ ಸಭೆಯ ವೇಳೆಗೆ ದೊಡ್ಡ ಬೆಳವಣಿಗೆ ತರುವಂತೆ ಪ್ರಯತ್ನಿಸಬೇಕು.”
ಈ ಸಭೆಯಲ್ಲಿ, ಭಾರತದೊಂದಿಗೆ ರಷ್ಯಾದ ವಾಣಿಜ್ಯ, ಆರ್ಥಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸುವ ವಿಷಯಗಳೂ ಚರ್ಚಿಸಲ್ಪಟ್ಟವು. ಇದೇ ವರ್ಷದ ಕೊನೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರಲು ವೇದಿಕೆ ಸಿದ್ಧಪಡಿಸುವುದೂ ಸಭೆಯ ಉದ್ದೇಶಗಳಲ್ಲಿ ಒಂದಾಗಿತ್ತು.
ಇನ್ನೊಂದೆಡೆ, ಅಮೆರಿಕ ಭಾರತಕ್ಕೆ ಬೆದರಿಕೆ ಹಾಕಿದರೂ, ರಷ್ಯಾ ತನ್ನ ಹಳೆಯ ಮಿತ್ರ ರಾಷ್ಟ್ರವಾದ ಭಾರತಕ್ಕೆ ತೈಲವನ್ನು ಕಡಿಮೆ ಬೆಲೆಗೆ ನೀಡುವ ಹೊಸ ಆಫರ್ ಘೋಷಿಸಿದೆ. ಈಗಾಗಲೇ ನಡೆಯುತ್ತಿರುವ ತೈಲ ಖರೀದಿಗೆ ಹೋಲಿಸಿದರೆ ಶೇಕಡಾ 5 ಕಡಿಮೆ ದರದಲ್ಲಿ ನೀಡಲು ರಷ್ಯಾ ಮುಂದಾಗಿದೆ.