ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ ಅವರ ಭೂಮಿಗೆ ಮರಳುವ ದಿನಾಂಕ ಫಿಕ್ಸ್ ಆಗಿದೆ. ಭೂಮಿಗೆ ಹಿಂದಿರುಗುವ ಭರವಸೆ ಇಲ್ಲದಿದ್ದ ಈ ಗಗನಯಾತ್ರಿ ಜೋಡಿಗೆ ಕೊನೆಗೂ ಖಚಿತ ದಿನಾಂಕ ಸಿಕ್ಕಿದೆ.
ನಾಸಾ ಪ್ರಕಟಿಸಿರುವ ಮಾಹಿತಿ ಪ್ರಕಾರ, ಈ ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಸ್ಪೇಸ್ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ನೌಕೆಯಲ್ಲಿ ಫ್ಲೋರಿಡಾ ಕರಾವಳಿಯಲ್ಲಿ ಇಳಿಯುವ ಸಾಧ್ಯತೆ ಇದೆ. ಅವರೊಂದಿಗೆ ಅಮೇರಿಕಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಸಹ ಪ್ರಯಾಣಿಸುತ್ತಿದ್ದಾರೆ.
ಕಳೆದ 284 ದಿನಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ವಿಲಿಯಮ್ಸ್ ಮತ್ತು ವಿಲ್ಮೋರ್, ಬೋಯಿಂಗ್ ಸ್ಟಾರ್ಲೈನರ್ ನೌಕೆಯ ತಾಂತ್ರಿಕ ದೋಷದಿಂದ ಹಿಂದಿರುಗಲು ಸಾಧ್ಯವಾಗಿರಲಿಲ್ಲ.
ಭೂಮಿಯ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಸವಾಲು
- ಭೂಮಿಗೆ ಮರಳಿದ ನಂತರ ದೇಹವು ಭೂಮಿಯ ಗುರತ್ವಾಕರ್ಷಣೆಗೆ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
- ಮೂಳೆಗಳ ದೌರ್ಬಲ್ಯ, ಸ್ನಾಯು ಕ್ಷೀಣತೆ, ದೃಷ್ಟಿ ಸಮಸ್ಯೆ, ಸಮತೋಲನ ಕಳೆದುಕೊಳ್ಳುವುದು ಸೇರಿದಂತೆ ಅನೇಕ ದೈಹಿಕ ತೊಂದರೆಗಳಿಗೆ ಗಗನಯಾತ್ರಿ ಗಳು ಒಳಗಾಗುವ ಸಾಧ್ಯತೆ ಇದೆ.
- ವಿಕಿರಣದ ಪರಿಣಾಮ, ರೋಗನಿರೋಧಕ ಶಕ್ತಿ ಕುಗ್ಗಬಹುದು, ಕೆಲ ಸಂದರ್ಭಗಳಲ್ಲಿ ಕ್ಯಾನ್ಸರ್ ಸಹ ಉಂಟಾಗಬಹುದು.
ಭೂಮಿಗೆ ಮರಳಿದ ಬಳಿಕ, ಗಗನಯಾತ್ರಿ ಗಳು ಪುನರ್ವಸತಿ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆ, ವ್ಯಾಯಾಮ, ನಡೆಯಲು ತರಬೇತಿ ಸೇರಿದಂತೆ ವಿವಿಧ ಚಿಕಿತ್ಸೆಗಳ ಮೂಲಕ ಭೂಮಿಯ ಪರಿಸ್ಥಿತಿಗೆ ಹೊಂದಿಕೊಳ್ಳಲಿದ್ದಾರೆ.
284 ದಿನಗಳ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಮತ್ತೆ ಭೂಮಿಯ ಒಡನಾಟಕ್ಕೆ ಮರಳಲಿದ್ದಾರೆ!