Bengaluru: ಕಳಸಾ – ಬಂಡೂರಿ ಕುಡಿಯುವ ನೀರು ಯೋಜನೆಗೆ (Kalasa-Banduri project) ಕೇಂದ್ರದಿಂದ ಪರಿಸರ ಅನುಮತಿ ಸಿಗದೆ ಇರುವುದಕ್ಕೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ಅನುಮತಿ ಮತ್ತಷ್ಟು ವಿಳಂಬವಾದರೆ ಯೋಜನೆ ಕಾಮಗಾರಿಯನ್ನು ರಾಜ್ಯ ಸರ್ಕಾರವೇ ಪ್ರಾರಂಭಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಹಕ್ಕು ಸಿಕ್ಕಿದೆ, ಕೇಂದ್ರ ಜಲ ಆಯೋಗವೂ ಹಸಿರು ನಿಶಾನೆ ತೋರಿಸಿದೆ. ಆದರೆ ಪರಿಸರ ಇಲಾಖೆಯಿಂದ ಮಾತ್ರ ಅನುಮತಿ ಸಿಗುತ್ತಿಲ್ಲವೆಂದು ಡಿಕೆಶಿ ಹೇಳಿದರು.
“ಅಗತ್ಯವಿದ್ದರೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯನ್ನು ಹಿಂತೆಗೆದುಕೊಂಡು ಕಾಮಗಾರಿ ಪ್ರಾರಂಭಿಸುತ್ತೇವೆ. ಯಾವುದೇ ಕಾನೂನು ಅಡಚಣೆ ಇಲ್ಲ” ಎಂದು ಹೇಳಿದರು.
“ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಹಾಗೂ ಅವಾರ್ಡ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅನುಮತಿ ಸಿಕ್ಕ ತಕ್ಷಣ ಒಂದು ವರ್ಷದೊಳಗೆ ಫಲಿತಾಂಶಗಳನ್ನು ಕಾಣಬಹುದು” ಎಂದರು.
ಗೋವಾ ವನ್ಯಜೀವಿ ಅಧಿಕಾರಿಗಳ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ರಾಜ್ಯಕ್ಕೆ ನೋಟಿಸ್ ನೀಡಲು ಅವರಿಗೆ ಅಧಿಕಾರವಿಲ್ಲ. ಕೇಂದ್ರ ಅಥವಾ ನ್ಯಾಯಾಲಯ ಮಾತ್ರ ನೋಟಿಸ್ ನೀಡಬಹುದು” ಎಂದು ಸ್ಪಷ್ಟಪಡಿಸಿದರು.
“ಯೋಜನೆಗೆ ಶೀಘ್ರ ಪರಿಸರ ಅನುಮತಿ ಸಿಗಲೆಂದು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುತ್ತೇವೆ. ರಾಜ್ಯದ ಹಿತಾಸಕ್ತಿಗಾಗಿ ಇದನ್ನು ಇನ್ನೂ ವಿಳಂಬ ಮಾಡಲಾಗುವುದಿಲ್ಲ. ಬಿಜೆಪಿ ಶಾಸಕರು ಹಾಗೂ ಸಂಸದರೂ ಒತ್ತಡ ತರಬೇಕು” ಎಂದು ಡಿಕೆಶಿ ಹೇಳಿದರು.