Delhi: ಗುರುವಾರ ಬೆಳಗಿನ ಭಾರೀ ಮಳೆಯಿಂದ ದೆಹಲಿ ನಗರದಲ್ಲಿ ಜೀವನ ಅಸ್ತವ್ಯಸ್ತವಾಯಿತು. ಅನೇಕ ರಸ್ತೆಗಳಲ್ಲಿ ನೀರು ನಿಂತು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಹವಾಮಾನ ಇಲಾಖೆ ದೆಹಲಿಗೆ ಆರೇಂಜ್ ಆಲರ್ಟ್ ಘೋಷಿಸಿತ್ತು. ಸಫ್ದರ್ಜಂಗ್‌ನಲ್ಲಿ 13.1 ಮಿ.ಮೀ, ಪಾಲಂನಲ್ಲಿ 49.4 ಮಿ.ಮೀ, ಲೋಧಿ ರಸ್ತೆಯಲ್ಲಿ 12 ಮಿ.ಮೀ, ಪ್ರಗತಿ ಮೈದಾನದಲ್ಲಿ 9 ಮಿ.ಮೀ, ಪುಸಾದಲ್ಲಿ 5 ಮಿ.ಮೀ ಮಳೆಯಾಗಿದೆ. ತಾಪಮಾನ ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಲಜಪತ್ ನಗರ, ರೋಹ್ಟಕ್ ರಸ್ತೆ, ಆನಂದ್ ಪರ್ಬತ್, ಜಹಾಂಗೀರ್ಪುರಿ, ಆದರ್ಶ ನಗರ, ಮಥುರಾ ರಸ್ತೆ, ಧೌಲಾ ಕುವಾನ್-ಗುರುಗ್ರಾಮ್ ರಸ್ತೆ ಮುಂತಾದ ಹಲವೆಡೆ ನೀರು ನಿಂತು, ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಕೆಲವು ಬಸ್ ಮತ್ತು ಕಾರುಗಳು ಮಧ್ಯ ರಸ್ತೆಯಲ್ಲೇ ಸಿಲುಕಿಕೊಂಡಿವೆ.
ದ್ವಾರಕಾ, ಗುರುಗ್ರಾಮ್, ಗಾಜಿಯಾಬಾದ್, ನೋಯ್ಡಾದ ಕೆಲ ಭಾಗಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ. ಟ್ರಾಫಿಕ್ ಪೊಲೀಸರು ಜಲಾವೃತ ರಸ್ತೆಗಳು ತಪ್ಪಿಸಲು ಪರ್ಯಾಯ ಮಾರ್ಗ ಬಳಸುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಎಎಪಿ ಪಕ್ಷದ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ಮಳೆಯಿಂದ ಉಂಟಾದ ಸಮಸ್ಯೆಗೆ ದೆಹಲಿ ಸರ್ಕಾರದ ನಿರ್ಲಕ್ಷ್ಯ ಕಾರಣವೆಂದು ಟೀಕಿಸಿದ್ದಾರೆ.