Vijayapura, Devanahalli : ವಿಜಯಪುರ ಪಟ್ಟಣದ ಯಲುವಹಳ್ಳಿ ರಸ್ತೆಯ ಮುನೇಶ್ವರ ದೇವಾಲಯದ ಸಮೀಪದಲ್ಲಿ 9ನೇ ಶತಮಾನದ ತುರುಗೋಳ್ ಶಾಸನವೊಂದು ಪತ್ತೆಯಾಗಿದೆ. ಶನಿವಾರ ಇತಿಹಾಸ ತಜ್ಞರು ಶಾಸನದ ವಿಷಯವನ್ನು ಪರಿಶೀಲಿಸಿ, ಅಲ್ಲಿ ಬರೆದ ಮಾಹಿತಿಯನ್ನು ಸಂಗ್ರಹಿಸಿದರು.
ಶಾಸನವು ಹಳಗನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, 9ನೇ ಶತಮಾನದಲ್ಲಿ ಶತ್ರುಗಳೊಂದಿಗೆ ಯುದ್ಧ ನಡೆಸಿ ಗೋವುಗಳನ್ನು ರಕ್ಷಿಸಿದ ವೀರನಿಗೆ ಗದ್ದೆಯನ್ನು ದಾನವಾಗಿ ನೀಡಿದ ಕುರಿತು ಉಲ್ಲೇಖಿಸುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸಂಸ್ಥಾಪಕ ಸದಸ್ಯ ಪಿ.ವಿ. ಕೃಷ್ಣಮೂರ್ತಿ ವಿವರಿಸಿದರು.
ಇತಿಹಾಸ ತಜ್ಞ ಪ್ರೊ. ಕೆ.ಆರ್. ನರಸಿಂಹನ್ ಅವರು, “ಶಾಸನಗಳು ಮತ್ತು ವೀರಗಲ್ಲುಗಳು ಇತಿಹಾಸ ತಿಳಿಯಲು ಮಹತ್ವದ ಆಧಾರವಾಗುತ್ತವೆ. ಇವುಗಳನ್ನು ಪುರಾವೆಗಳಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇವು ಮುಂದಿನ ಪೀಳಿಗೆಗೆ ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಅರಿಯಲು ನೆರವಾಗುತ್ತವೆ” ಎಂದು ಹೇಳಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಕಮಿಟಿ ಸದಸ್ಯರಾದ ಕೆ. ಧನಪಾಲ್ ಮತ್ತು ಸುದರ್ಶನ್ ಈ ವೇಳೆ ಉಪಸ್ಥಿತರಿದ್ದರು.