Devanahalli : ಬುಧವಾರ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆದ ವ್ಯವಸಾಯ ಸೇವಾ ಸಹಕಾರ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಆರ್. ಮಂಜುನಾಥ್ “ಕಾರಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘವು 2020-21ನೇ ಸಾಲಿನಲ್ಲಿ ₹ 11,66,361 ನಿವ್ವಳ ಲಾಭಗಳಿಸಿದೆ” ಎಂದು ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರು ” 7 ಹಳ್ಳಿಗಳಿಗೆ ಸಂಬಂಧಿಸಿದ ರೈತರು ಸಂಘದಲ್ಲಿ ವ್ಯವಹರಿಸುತ್ತಿದ್ದೂ ಸದಸ್ಯರು ಹಾಗೂ ಸದಸ್ಯರಲ್ಲದ ರೈತರಿಗೂ ಕಾಲಕಾಲಕ್ಕೆ ಅಗತ್ಯವಿರುವ ಸಾಲ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ಸಹಕಾರ ಸಂಘದಿಂದ ರೈತರು ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಾರೋ ಅದೇ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಾಗ ಮಾತ್ರ ನಿಗದಿತ ಸಮಯದಲ್ಲಿ ಮರುಪಾವತಿ ಮಾಡಲು ಸಾಧ್ಯ. ಸುಸ್ತಿದಾರರಾದರೆ ಯಾವುದೇ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ. ಪಡಿತರ ಧಾನ್ಯ, ರಸಗೊಬ್ಬರ ಮಾರಾಟ, ಜನತಾ ಬಜಾರ್, ಪಶು ಆಹಾರ ಮಾರಾಟ ಮುಂತಾದ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ” ಎಂದು ಹೇಳಿದರು.
ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಉಳಿದ ರೈತರಿಗೆ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಗಳಿಗೆ ಕಷವಾಗುತ್ತದೆ. ಯಾವ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಹೆಚ್ಚು ಸಾಧನೆ ಮಾಡುತ್ತವೋ ಅಂತಹ ಸಂಘಗಳಿಗೆ ನಬಾರ್ಡ್‌ನಿಂದ ಹೆಚ್ಚು ಸಾಲ ಸೌಲಭ್ಯ ಪಡೆಯಲು ಅವಕಾಶವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ನಾವು ಏಳಿಗೆಯಾಗಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್. ಸೊಣ್ಣಪ್ಪ ತಿಳಿಸಿದರು.
ಕಾರ್ಯಕ್ರಮದ್ದಲ್ಲಿ ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸಿ. ಮುನಿಕೆಂಪಣ್ಣ, ಮೀನಾಕ್ಷಿ ಮುನಿಕೃಷ್ಣಪ್ಪ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎ. ದೇವರಾಜು, ನಿರ್ದೇಶಕರಾದ ಎನ್. ರಮೇಶ್, ದೊಡ್ಡಮಲ್ಲಾಚಾರ್, ಲಕ್ಷ್ಮಮ್ಮ, ಸುಬ್ಬಮ್ಮ, ನಾರಾಯಣಮ್ಮ, ಎನ್. ಶಶಿಕುಮಾರ್, ಗಂಗಪ್ಪ, ಟಿ. ಆಂಜನಪ್ಪ, ನಾಗೇಶ್, ಸಿ. ಪ್ರಕಾಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ದ್ಯಾವಪ್ಪ ಉಪಸ್ಥಿತರಿದ್ದರು.