ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗೆ ಭಾರತದ ತಂಡವನ್ನು (Team India) ಮುನ್ನಡೆಸಲು ಮಾಜಿ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ. ಆಯೋಜಕರು ಮಂಗಳವಾರ ಇದನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪಂದ್ಯಾವಳಿಗಳು ನವೆಂಬರ್ 7 ರಿಂದ ಪ್ರಾರಂಭವಾಗಲಿದೆ.
ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ: “ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ನನಗೆ ಅಪರೂಪದ ಗೌರವ. ಈ ಟೂರ್ನಮೆಂಟ್ ಶ್ರೀಮಂತ ಇತಿಹಾಸ ಹೊಂದಿದ್ದು, ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಅತ್ಯುತ್ತಮ ಆಟಗಾರರ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ. ಅಭಿಮಾನಿಗಳಿಗೆ ಸಂತೋಷ ಮತ್ತು ಮನರಂಜನೆ ನೀಡುತ್ತೇವೆ ಮತ್ತು ಉತ್ತಮ ಕ್ರಿಕೆಟ್ ಆಡಲು ಯತ್ನಿಸುತ್ತೇವೆ.”
ಹಾಂಗ್ ಕಾಂಗ್ ಕ್ರಿಕೆಟ್ ಅಧ್ಯಕ್ಷ ಬುರ್ಜಿ ಶ್ರಾಫ್ ಹೇಳಿದರು: “2025ರ ಹಾಂಗ್ ಕಾಂಗ್ ಸಿಕ್ಸಸ್‌ಗೆ ಟೀಮ್ ಇಂಡಿಯಾದ ನಾಯಕನಾಗಿ ದಿನೇಶ್ ಕಾರ್ತಿಕ್ ಅವರನ್ನು ಸ್ವಾಗತಿಸಲು ನಮಗೆ ಸಂತೋಷ. ಅವರ ನಾಯಕತ್ವ ಮತ್ತು ಕ್ರಿಕೆಟ್ ಅನುಭವವು ಸ್ಪರ್ಧೆಗೆ ಅಪಾರ ಮೌಲ್ಯ ತರುತ್ತದೆ. ಅಭಿಮಾನಿಗಳನ್ನು ಈ ಕ್ರಿಕೆಟ್ ಹಬ್ಬಕ್ಕೆ ಆಕರ್ಷಿಸುತ್ತದೆ ಎಂದು ನಮಗೆ ವಿಶ್ವಾಸ.”
ಇತ್ತೀಚೆಗೆ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್ ಸಹ ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಭಾರತ ಪರ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ವಾಣಿಜ್ಯ ಮತ್ತು ವ್ಯವಸ್ಥಾಪಕ ಪಾಲುದಾರ ಶ್ರೀ ರಜನೀಶ್ ಚೋಪ್ರಾ ಹೇಳಿದರು: “ದಿನೇಶ್ ಕಾರ್ತಿಕ್ ಭಾರತವನ್ನು ಮುನ್ನಡೆಸುತ್ತಿರುವುದು ನಮಗೆ ಹೆಮ್ಮೆ. ಅವರ ವರ್ತನೆ ಮತ್ತು ಒತ್ತಡದಲ್ಲೂ ಕಾರ್ಯ ನಿಭಾಯಿಸುವ ಸಾಮರ್ಥ್ಯವೇ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.”
ಈ ಟೂರ್ನಮೆಂಟ್ 1992ರಲ್ಲಿ ಪ್ರಾರಂಭವಾಯಿತು ಮತ್ತು ಒಟ್ಟು 12 ತಂಡಗಳು ಪಾಲ್ಗೊಳ್ಳುತ್ತವೆ. ಭಾರತ 2005ರಲ್ಲಿ ಒಮ್ಮೆ ಪ್ರಶಸ್ತಿ ಗೆದ್ದಿದೆ. 1992 ಮತ್ತು 1995ರಲ್ಲಿ ಫೈನಲ್ ತಲುಪಿದರೂ ಪ್ರಶಸ್ತಿ ಕಳೆದುಕೊಂಡಿದೆ. ಪಾಕಿಸ್ತಾನವು ಐದು ಬಾರಿ ಚಾಂಪಿಯನ್ ಆಗಿದೆ.
ಹಾಂಗ್ ಕಾಂಗ್ ಸಿಕ್ಸಸ್‌ನ ಕಳೆದ ಆವೃತ್ತಿಯಲ್ಲಿ ಭಾರತ ತಂಡ ನಿರಾಶಾದಾಯಕವಾಗಿ ಪ್ರದರ್ಶನ ನೀಡಿತು. ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ತಂಡವು ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಪಾಕಿಸ್ತಾನ ಮತ್ತು ಯುಎಇ ವಿರುದ್ಧ ಭಾರತ ಸೋತಿತ್ತು.
ಪಂದ್ಯ ನಿಯಮಗಳು
- ಒಟ್ಟು ಆರು ಆಟಗಾರರು ಇರುವ ತಂಡ
- ಒಂದು ಇನ್ನಿಂಗ್ಸ್ ಆರು ಓವರ್
- ಪ್ರತಿಯೊಬ್ಬ ಆಟಗಾರರು ಕೇವಲ ಒಂದು ಓವರ್ ಬೌಲಿಂಗ್ ಮಾಡಬಹುದು
- ಫ್ರೀ ಹಿಟ್ ಅಥವಾ ನೋ-ಬಾಲ್ ಇಲ್ಲ
- ಆಟಗಾರನು ಅರ್ಧ ಶತಕ ಗಳಿಸಿದರೆ ನಿವೃತ್ತಿ ಆಗಬೇಕು