Doddabalapura : ದೊಡ್ಡಬಳ್ಳಾಪುರದ ಶ್ರೀಭುವನೇಶ್ವರಿ ಕನ್ನಡ ಸಂಘ ಮತ್ತು Athletics Club ಸಂಯುಕ್ತವಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ 5 ಕಿ.ಮೀ ಮ್ಯಾರಥಾನ್ (Marathon) ಆಯೋಜನೆ ಮಾಡಿತು. ಸಿದ್ದಲಿಂಗಯ್ಯ ವೃತ್ತದಿಂದ ಭಗತ್ ಸಿಂಗ್ ಕ್ರೀಡಾಂಗಣದವರೆಗೆ ನಡೆದ ಈ ಮ್ಯಾರಥಾನ್‌ನಲ್ಲಿ ನೂರಾರು ಮಂದಿ ಕನ್ನಡ ಸಂದೇಶ ಸಾರುವ ಟೀ-ಷರ್ಟ್‌ಗಳನ್ನು ಧರಿಸಿ ಭಾಗವಹಿಸಿದರು.
ಮ್ಯಾರಥಾನ್‌ಗೆ ಚಾಲನೆ ನೀಡಿದ ಎನ್‌ಸಿಸಿ ಅಧಿಕಾರಿ ಮೇಜರ್ ಮಹಾಬಲೇಶ್ವರ್ ಮಾತನಾಡಿ, “ಕನ್ನಡದ ಉಳಿವಿಗಾಗಿ ಹೋರಾಟ ಅತ್ಯಂತ ಅಗತ್ಯವಾಗಿದೆ. ಅನ್ಯ ಭಾಷಿಕರು ಇಲ್ಲಿಗೆ ಬಂದು ನೆಲೆಸಿದರೆ ಕನ್ನಡ ಕಲಿಯುವ ಪಣ ತೊಡಬೇಕಾಗಿದೆ. ಯುವಜನತೆ ದುಶ್ಚಟಗಳಿಂದ ದೂರ ಉಳಿದು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ನಗರಸಭೆಯ ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, “ನೆಲ ಮತ್ತು ಜಲದ ಸವಲತ್ತುಗಳನ್ನು ಪಡೆದು ಕನ್ನಡ ಭಾಷೆ ಮತ್ತು ಸ್ಥಳೀಯರಿಗೆ ಕೆಲಸ ನೀಡದೇ ಇರುವಂತಹ ಕೃತ್ಯ ಅಕ್ಷಮ್ಯ. ಕನ್ನಡ ನಾಡು ಮತ್ತು ನುಡಿಗಳ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ” ಎಂದರು.
ಶ್ರೀಭುವನೇಶ್ವರಿ ಕನ್ನಡ ಸಂಘದ ಗೌರವ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಕನ್ನಡ ಪರ ಹೋರಾಟದ ಮಹತ್ವವನ್ನು ವಿವರಿಸಿದರು. “ಕನ್ನಡ ನಾಡು ನುಡಿಗೆ ಶ್ರಮಿಸೋಣ ಎಂಬ ಉದ್ದೇಶದೊಂದಿಗೆ ಈ ಮ್ಯಾರಥಾನ್ ನಡೆಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸರ್ಕಾರಭೌಮವಾಗಬೇಕು” ಎಂದು ಹೇಳಿದರು
ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ಪ್ರತ್ಯೇಕ ಬಹುಮಾನಗಳನ್ನು ವಿತರಿಸಲಾಯಿತು. ಪುರುಷ ವಿಭಾಗದಲ್ಲಿ ಎಚ್.ಎ.ದರ್ಶನ್, ನಂದನ್, ಕೆ.ವಿ.ದರ್ಶನ್ ಮತ್ತು ಮಹಿಳಾ ವಿಭಾಗದಲ್ಲಿ ಪ್ರಣತಿ ಜಯಲಕ್ಷ್ಮೀ, ದಿದ್ಯ, ನೀತು ಮೊದಲಾದವರು ಪ್ರಶಸ್ತಿ ಪಡೆದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್‌ಗೌಡ ಮಾತನಾಡಿ, “ಕನ್ನಡ ನಾಡು ಮತ್ತು ನುಡಿಗೆ ಶ್ರಮಿಸುವ ಪ್ರತಿಯೊಬ್ಬರೂ ಮ್ಯಾರಥಾನ್ ಮೂಲಕ ಪ್ರೇರಣೆ ಪಡೆಯುತ್ತಾರೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿಯಾಗುತ್ತದೆ” ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮೊದಲಾದವರು ಭಾಗವಹಿಸಿದ್ದರು.