Doddaballapur : ದೊಡ್ಡಬಳ್ಳಾಪುರ ನಗರದ ಗ್ರಾಮ ದೇವತೆ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವ (Mutyalamma devi Jathre Mahotsava) ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 10.30ಕ್ಕೆ ದೇವಾಲಯ ದಿಂದ ಹೊರಟ ದೇವಿಯ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೋಜಿಪುರ ತಲುಪಿತು.
ಜಾತ್ರೆ ಅಂಗವಾಗಿ ದೇವಾಲಯದ ಸುತ್ತಲಿನ ಗ್ರಾಮಗಳಿಂದ ಗ್ರಾಮಸ್ಥರು ಹೊಂಬಾಳೆಯಲ್ಲಿ ಸಿಂಗರಿಸಿಕೊಂಡು ಬಂದಿದ್ದ ವಿವಿಧ ಮಾದರಿಯ ಆರತಿಗಳನ್ನು ದೇವಿಗೆ ಬೆಳಗಿದರು. ಮುತ್ಯಾಲಮ್ಮ ದೇಗುಲದ ಸಮೀಪವಿರುವ ನವಗ್ರಹ ದೇವಾಲಯ ಹಾಗೂ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವವಹಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಮಂಗಳವಾದ್ಯಗಳೊಂದಿಗೆ ಭಾಗವಹಿಸಿದ್ದ ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ವೀರಗಾಸೆ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದ್ದವು.