Bantwal: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ, ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ, ಯುವಕ ನಾಗರಾಜ್ ಬಜಾಲ್ (Nagaraj Bajal) ತಮ್ಮ ಕೈಯಲ್ಲಿ “ರಸ್ತೆ ಬದಿಯಲ್ಲಿ ಕಸ ಎಸೆಯಬೇಡಿ” ಎಂಬ ಬೋರ್ಡ್ ಹಿಡಿದು ನಿಂತು ಜನರ ಗಮನ ಸೆಳೆಯುತ್ತಿದ್ದಾರೆ.
ನಾಗರಾಜ್ ಹಸಿರು ದಳದ ಸದಸ್ಯರಾಗಿದ್ದು, ಕಳೆದ ಎರಡು ತಿಂಗಳಿನಿಂದ ಪ್ರತಿದಿನ ಬೆಳಿಗ್ಗೆ 5:30ರಿಂದ 9:00ರವರೆಗೆ ಈ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಈ ಪ್ರಯತ್ನದ ಫಲವಾಗಿ ಫರಂಗಿಪೇಟೆ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆಯುವ ಸಮಸ್ಯೆ ಬಹಳಷ್ಟು ಕಡಿಮೆಯಾಗಿದೆ.
ಇವರು ಹಿಂದೆಯೂ ಉಳ್ಳಾಲದ ನೇತ್ರಾವತಿ ಸೇತುವೆ, ಮಂಗಳೂರು ಬಳಿ ಅಡ್ಯಾರ್ ಸೇರಿ ಹಲವೆಡೆ ಇದೇ ರೀತಿಯ ಜಾಗೃತಿ ಕಾರ್ಯ ಮಾಡಿದ್ದು, ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಒಳ್ಳೆಯ ಒತ್ತಾಸೆಯ ಮೂಡಿಸಿದ್ದಾರೆ.
ಈ ಹೋರಾಟದ ಪ್ರಾರಂಭದಲ್ಲಿ ಕೆಲವರು ನಾಗರಾಜ್ ಅವರನ್ನು “ಹುಚ್ಚ” ಎನ್ನುತ್ತಿದ್ದರು. ಆದರೆ ಈಗ ಇವರ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ಸಿಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಇವರನ್ನು ನೋಡಿ ಕಲಿಯುತ್ತಿದ್ದಾರೆ. ಸ್ಥಳೀಯರು ಬಂದು ಮಾತನಾಡಿ ಹೊಗಳುತ್ತಿದ್ದಾರೆ.
ಫರಂಗಿಪೇಟೆಯ ರಸ್ತೆ ಬದಿ ಈಗ ಸ್ವಚ್ಛವಾಗಿದೆ. 90% ಕಸ ಎಸೆಯುವ ಪ್ರಮಾಣ ಕಡಿಮೆಯಾಗಿದೆ. ಜನರ ಮನಸ್ಸಿನಲ್ಲಿ “ಕಸ ಎಸೆಯಬಾರದು” ಎಂಬ ಬದಲಾವಣೆ ಕಾಣಿಸುತ್ತಿದೆ.
ಚಿತ್ತಾರ್ ಬಂಟ್ವಾಳ್ ಎಂಬ ಪ್ರಯಾಣಿಕರು ನಾಗರಾಜ್ ಅವರ ಕೆಲಸ ನೋಡಿ ತಮ್ಮ ವಾಹನ ನಿಲ್ಲಿಸಿ ಮಾತನಾಡಿದ್ದಾರೆ. ಅವರು ಬೇರೆಯವರಿಗೂ ಇದೇ ಸಂದೇಶ ಹರಡುವ ನಿರ್ಧಾರ ಮಾಡಿಕೊಂಡಿದ್ದಾರೆ.
ನಾಗರಾಜ್ ಅವರ ಈ ಪ್ರಾಮಾಣಿಕತೆ ಇತರರಿಗೆ ಪ್ರೇರಣೆ ನೀಡಿದ್ದು, ಪರಿಸರದ ಬಗ್ಗೆ ಜವಾಬ್ದಾರಿ ಅನುಭವಿಸುವ ಮನಸ್ಥಿತಿಗೆ ದಾರಿ ಮಾಡಿಕೊಡುತ್ತಿದೆ.