ರಾಜ್ಯದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರಲು ರೂಪಿಸಲಾಗುತ್ತಿರುವ ಕರಡು ನಿಯಮಾವಳಿಗಳನ್ನು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಪರಿಶೀಲಿಸಿದರು. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿ, ಒಂದು ವಾರದಲ್ಲಿ ನಿಯಮಾವಳಿಗಳನ್ನು ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ತೆರಿಗೆ ದರ, ಫೀಜು ವಿಧಿಸುವ ವಿಧಾನ, ಕಟ್ಟಡ ಮತ್ತು ಭೂಮಿಗೆ ತೆರಿಗೆ, ನಮೂನೆ 11-ಎ ನಿರ್ವಹಣೆ, ಮೇಲ್ಮನವಿ, ದಂಡನೆಗಳು, ನೀರು ಸರಬರಾಜು ದರ, ತಗಾದೆ ನೋಟೀಸ್, ಜಫ್ತಿ ಹಾಗೂ ಮಾರಾಟ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಶ್ ಮುದ್ಗಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಣದೀಪ್, ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಅವರು ಇ-ಸ್ವತ್ತು ಕುರಿತಂತೆ ಹಲವು ಸಲಹೆಗಳನ್ನು ನೀಡಿದರು.
ಇತ್ತೀಚಿನ ವಿಧಾನಸಭೆ ಅಧಿವೇಶನದಲ್ಲೂ ಸಚಿವರು ಇ-ಸ್ವತ್ತು ಕುರಿತು ಪ್ರಸ್ತಾಪಿಸಿದ್ದರು. ಮುಂದಿನ ಒಂದೂವರೆ ತಿಂಗಳಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 11-ಬಿ ಖಾತೆ ವಿತರಣೆ ಮಾಡಲಾಗುವುದೆಂದು ಭರವಸೆ ನೀಡಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ 29 ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ನಿಯಮ ರೂಪಿಸಲಾಗುತ್ತದೆ. ಸದ್ಯ ನಮೂನೆ 11-ಬಿ ಖಾತೆ ನೀಡಲಾಗುತ್ತಿಲ್ಲ ಎಂದು ಸಚಿವರು ತಿಳಿಸಿದರು.
ಇ-ಸ್ವತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಸಮಿತಿ ರಚಿಸಲಾಗಿದೆ. ದಿಶಾಂಕ ಆ್ಯಪ್‌ನಲ್ಲಿ ಕಂಡುಬರುವ ಲೋಪಗಳನ್ನು ಸರಿಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.







