Islamabad: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಸೇನಾ ನಾಯಕ ಹಸ್ನೈನ್ ಅಖ್ತರ್ (Pakistan Army leader Hasnain Akhtar) ಮೃತಪಟ್ಟಿದ್ದು, 10 ಉಗ್ರರು ಹತರಾಗಿದ್ದಾರೆ. ಪಾಕಿಸ್ತಾನ ಸೇನೆಯ ಮಾಹಿತಿ ಪ್ರಕಾರ, ಈ ಎನ್ಕೌಂಟರ್ ಗುರುವಾರ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕರ್ರಿ ಮಲಾಂಗ್ ಪ್ರದೇಶದಲ್ಲಿ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ ಕ್ಯಾಪ್ಟನ್ ಸಹ ಮೃತಪಟ್ಟಿದ್ದಾರೆ. ಇನ್ನು ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆಯು ತಿಳಿಸಿದೆ. ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ 10 ಭಯೋತ್ಪಾದಕರು ಹತರಾಗಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ರೈಲು ಅಪಹರಣ ಕೋಲಾಹಲ ಉಂಟುಮಾಡಿತ್ತು. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಈ ಅಪಹರಣಕ್ಕೆ ಹೊಣೆವಾಯಿತು. ಸೇನೆಯ ಪ್ರಕಾರ, 33 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಮತ್ತು 214 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ.
ಪಾಕಿಸ್ತಾನ ಸೇನೆ ಭಯೋತ್ಪಾದನೆಯ ವಿರುದ್ಧ ಶೋಧ ಕಾರ್ಯಾಚರಣೆ ನಡೆಸುತ್ತಿದೆ. 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ. ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ಗಡಿ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿಗಳು ಹೆಚ್ಚಾಗಿವೆ. 2025ರಲ್ಲಿ ಪಾಕಿಸ್ತಾನದಲ್ಲಿ ಉಗ್ರ ದಾಳಿಗಳ ಪ್ರಮಾಣ ಶೇ.42ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ ಮಾತ್ರ 74 ದಾಳಿಗಳು ನಡೆದಿದೆ.