ಸಿರಿಯಾದಲ್ಲಿ (Syria) ಪ್ರಸ್ತುತ ರಾಜಕೀಯ ಸ್ಥಿತಿ ಗಂಭೀರವಾಗಿದೆ. ಅಸ್ಸಾದ್ ಸರ್ಕಾರ ಪತನಗೊಂಡಿದ್ದು, ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪರಿಸ್ಥಿತಿಯಲ್ಲಿ, ಭಾರತವು ತಕ್ಷಣದ ಕ್ರಮ ಕೈಗೊಂಡು 75 ಭಾರತೀಯರನ್ನು ಸುರಕ್ಷಿತವಾಗಿ ಲೆಬನಾನ್ ಗೆ ಸ್ಥಳಾಂತರಿಸಿದೆ. ಶೀಘ್ರದಲ್ಲೇ ಅವರು ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗಲಿದ್ದಾರೆ. ಸ್ಥಳಾಂತರಿತರಲ್ಲಿ ಜಮ್ಮು-ಕಾಶ್ಮೀರದ 44 ಯಾತ್ರಾರ್ಥಿಗಳೂ ಸೇರಿದ್ದಾರೆ.
ಡಮಾಸ್ಕಸ್ ನಗರದ 10 ಕಿಲೋಮೀಟರ್ ದೂರದ ಸೈದಾ ಜೈನಾಬ್ ಪಟ್ಟಣದಲ್ಲಿ ಭಾರತೀಯರು ಸಿಲುಕಿಕೊಂಡಿದ್ದರು. ಅವರ ಸುರಕ್ಷತೆಯ ಹಿತದೃಷ್ಟಿಯಿಂದ ಸ್ಥಳಾಂತರ ಕಾರ್ಯ ನಡೆಸಲಾಯಿತು.
ಸಿರಿಯಾದಲ್ಲಿ ಉಳಿದಿರುವ ಭಾರತೀಯ ನಾಗರಿಕರಿಗೆ ಭಾರತೀಯ ಸರ್ಕಾರ ಎಚ್ಚರಿಕೆ ನೀಡಿದ್ದು, ಸ್ಥಳೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಿದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ನಿರ್ಧಿಷ್ಟ ಮಾರ್ಗಸೂಚಿಗಳನ್ನು ಅನುಸರಿಸಲು ಸಲಹೆ ಮಾಡಲಾಗಿದೆ.
2011ರಲ್ಲಿ ಆರಂಭವಾದ ಸಿರಿಯಾದ ಗೃಹಯುದ್ಧವು 2024 ಡಿಸೆಂಬರ್ 8 ರಂದು ಬಶರ್ ಅಲ್-ಅಸ್ಸಾದ್ ಬಂಡಾಯ ಪಡೆಗಳಿಂದ ಹಂಗಾಮಿ ನೇತೃತ್ವಕ್ಕೆ ಜವಾಬ್ದಾರಿ ಹಸ್ತಾಂತರಿಸುವ ಮೂಲಕ ಅಂತ್ಯಗೊಂಡಿತು. ಅಸ್ಸಾದ್ ಕುಟುಂಬವು ಪಲಾಯನ ಮಾಡಿದ ನಂತರ, ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ರಾಜಕೀಯ ಆಶ್ರಯ ನೀಡಿರುವ ಕುರಿತು ವರದಿಗಳು ಲಭ್ಯವಿವೆ.