London: UK ಮೂಲದ HSBC bank ನ 159 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಅಲಂಕರಿಸಿದ್ದಾರೆ. ಅದೂ ಭಾರತದ ಮೂಲದ ಮಹಿಳೆಯೇ ಈ ಗೌರವ ಪಡೆದಿರುವುದು. ಪಂಜಾಬ್ ಸಂಜಾತೆಯಾದ ಪಾಮ್ ಕೌರ್ (Pam Kaur) ಅವರು HSBC ಹೋಲ್ಡಿಂಗ್ಸ್ನ CFO ಆಗಿ ನೇಮಕವಾಗಿದ್ದಾರೆ.
ಹಲವು ಜಾಗತಿಕ ಪ್ರಮುಖ ಸಂಸ್ಥೆಗಳಿಗೆ ಭಾರತ ಮೂಲದ ಸಿಇಒಗಳೇ ಹಲವರಿದ್ದಾರೆ. ಪಾಮ್ ಕೌರ್ (Pam Kaur) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಯೂರೋಪ್ನ ಅತಿದೊಡ್ಡ ಬ್ಯಾಂಕ್ ಎನಿಸಿರುವ HSBC ಸ್ಥಾಪನೆಯಾಗಿ 159 ವರ್ಷವಾಗಿದೆ.
ಹದಿನಾರು ದಶಕಗಳಷ್ಟು ಸುದೀರ್ಘ ಇತಿಹಾಸ ಇರುವ HSBCಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಪಡೆದಿದ್ದಾರೆ. ಅದೂ ಆ ಸಾಧನೆ ಬಂದಿದ್ದು ಭಾರತ ಮೂಲದ ವ್ಯಕ್ತಿಯಿಂದ ಎಂಬುದು ಹೆಮ್ಮೆಯ ವಿಚಾರ.
ಈ ಮುಂಚೆ ಸಿಎಫ್ಒ ಆಗಿದ್ದ ಜಾರ್ಜಸ್ ಎಲೆಡೆರಿ (Georges Elhedery) ಅವರು ಸಿಇಒ ಆಗಿ ಜವಾಬ್ದಾರಿ ಪಡೆದಿದ್ದರು. ಈ ವರ್ಷದಿಂದ ಸಿಎಫ್ಒ ಸ್ಥಾನ ಹಾಗೇ ಉಳಿದುಕೊಂಡಿತ್ತು.
2013 ರಿಂದಲೂ HSBC ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಪಾಮ್ ಕೌರ್ ಅವರ ಹೆಸರನ್ನು ಜಾರ್ಜಸ್ ಅವರೇ ಸೂಚಿಸಿದ್ದರು. ಅಕ್ಟೋಬರ್ 22, ಇಂದು ಕೌರ್ ಸಿಎಫ್ಒ ಆಗಿ ನೇಮಕವಾಗಿದ್ದಾರೆ.
ಪಂಜಾಬ್ನಲ್ಲಿ ಹುಟ್ಟಿದ ಪಾಮ್ ಕೌರ್ ಅವರು ಪಂಜಾಬ್ ಯೂನಿವರ್ಸಿಟಿಯಿಂದ ಬಿಕಾಂ ಮತ್ತು ಎಂಬಿಎ ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಓದಿದ್ದಾರೆ.
ಸಿಟಿ ಗ್ರೂಪ್, ಡಾಯ್ಷೆ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಗ್ರೂಪ್ ಆಡಿಟ್ನ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಗ್ರೂಪ್ನಲ್ಲಿ ಸಿಎಫ್ಒ ಮತ್ತು ಸಿಒಒ ಹುದ್ದೆ ಕೂಡ ಹೊಂದಿದ್ದರು.
HSBC ಹೋಲ್ಡಿಂಗ್ಸ್ನ ಸಿಎಫ್ಒ ಸ್ಥಾನಕ್ಕೆ ಹಲವರ ಹೆಸರು ಚಾಲನೆಯಲ್ಲಿದ್ದವು. ಸಂಸ್ಥೆಯ ಒಳಗೆ ಹೊರಗೆ ಅಭ್ಯರ್ಥಿಗಳನ್ನು ಆ ಸ್ಥಾನಕ್ಕೆ ಪರಿಶೀಲಿಸಲಾಗಿತ್ತು. ಆದರೆ, ಆ ಸ್ಥಾನಕ್ಕೆ ಪಾಮ್ ಕೌರ್ ಅವರು ಸೂಕ್ತ ಎನಿಸಿತು ಎಂದು ಜಾರ್ಜಸ್ ಎಲೆಡೆರಿ ಹೇಳಿದ್ದಾರೆ.