Dehradun (Uttarakhand): ಉತ್ತರಾಖಂಡದ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಇದರಿಂದ ರಸ್ತೆಗಳು, ಮನೆಗಳು ಹಾನಿಗೊಳಗಾಗಿದ್ದು, ಅನೇಕ ಜನ ಕಣ್ಮರೆಯಾಗಿದ್ದಾರೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿರುವಂತೆ, ಹಿಮಾಲಯದ ನದಿಗಳು ಉಕ್ಕಿಹರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟವೂ ಸಂಭವಿಸಿದೆ. ಪರಿಸ್ಥಿತಿ ಮೇಲ್ವಿಚಾರಣೆ ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ.
ರಾಜ್ಯದ 25–30 ಸ್ಥಳಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಮನೆಗಳು ಮತ್ತು ಸರ್ಕಾರಿ ಆಸ್ತಿಗಳು ಹಾನಿಗೊಂಡಿವೆ. ನದಿಗಳ ನೀರಿನ ಮಟ್ಟ ಹೆಚ್ಚಿರುವುದರಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಕೂಡ ಎಲ್ಲಾ ರೀತಿಯ ನೆರವು ನೀಡಲು ಸೂಚಿಸಿದ್ದಾರೆ. ಸಿಎಂ ಧಾಮಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾಹಿತಿ ನೀಡಿರುವಂತೆ, ಡೆಹ್ರಾಡೂನ್ ನಲ್ಲಿ ಸಹಸ್ರಧಾರ ಮತ್ತು ಮಾಲ್ ದೇವತಾ ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ, ಮಸ್ಸೂರಿಯಲ್ಲಿ ಕೂಡ ಒಂದು ಸಾವಿನ ಸಾಧ್ಯತೆ ಇದೆ. ಮಜರಾ ಗ್ರಾಮದಲ್ಲಿ ಭೂಕುಸಿತದಿಂದ ಕೆಲವು ಜನರು ಕಾಣೆಯಾಗಿದ್ದಾರೆ.
ಸ್ಥಳೀಯರ ಹೇಳಿಕೆಯಂತೆ, ರಾತ್ರಿ 11 ಗಂಟೆ ಸುಮಾರಿಗೆ ಬೆಟ್ಟ ಕುಸಿದ ಧ್ವನಿ ಕೇಳಿ, ಬೆಳಿಗ್ಗೆ ಎದ್ದು ನೋಡಿದಾಗ ಮನೆಗಳು ಕೊಚ್ಚಿ ಹೋಗಿರುವುದನ್ನು ಕಂಡಿದ್ದಾರೆ. ಹಲವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.
ವಿಪತ್ತು ನಿರ್ವಹಣಾ ತಂಡ ಈಗಾಗಲೇ 300–400 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದೆ. ತೆಹ್ರಿಯಲ್ಲಿ ನೀರಿನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ ಮತ್ತು ನೈನಿತಾಲ್ ನಲ್ಲಿ ಭಾರಿ ಮಳೆಯಿಂದ ಭೂಕುಸಿತದಿಂದ ರಸ್ತೆಗಳು ಹಾನಿಗೊಂಡಿವೆ.