Karwar: ಜಾನಪದ ಸಂಗೀತದ ಪ್ರಸಿದ್ಧ ಗಾಯಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ(Sukri Bommagowda) (88) ಇಂದು ಮುಂಜಾನೆ 3.30ಕ್ಕೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿ ಗ್ರಾಮದಲ್ಲಿ ಜನಿಸಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಕ್ರಿ ಬೊಮ್ಮಗೌಡ ಅವರನ್ನು ಜಾನಪದ ಕೋಗಿಲೆ ಎಂದೇ ಕರೆಯಲಾಗುತ್ತಿತ್ತು.
ಸುಕ್ರಿ ಬೊಮ್ಮಗೌಡ ತಮ್ಮ ತಾಯಿಯಿಂದ ಜಾನಪದ ಹಾಡುಗಳನ್ನು ಕಲಿತು, ಹಾಲಕ್ಕಿ ಒಕ್ಕಲಿಗ ಸಮುದಾಯದ ಸಾಂಪ್ರದಾಯಿಕ ಸಂಗೀತವನ್ನು ಸಂರಕ್ಷಿಸಲು ಶ್ರಮಿಸಿದ್ದರು. ಹಾಡುಗಳೊಂದಿಗೆ ಹಲವು ಸಾಮಾಜಿಕ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ಇತ್ತೀಚೆಗೆ ಶಿರೂರಿನ ಗುಡ್ಡ ಕುಸಿತ ದುರಂತಕ್ಕೂ ಅವರು ಮರುಗಿದ್ದರು.
ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು. ಸಾಂಸ್ಕೃತಿಕ ಸಂಗೀತ ಮತ್ತು ಕಲೆಗೆ ನೀಡಿದ ಕೊಡುಗೆಗಾಗಿ 2017ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ಜಾನಪದ ಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಗೌರವ, 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಅವರಿಗೆ ಲಭಿಸಿವೆ.
ಹಾಲಕ್ಕಿ ಸಮುದಾಯದ ಗೌರವಯುತ ವ್ಯಕ್ತಿಗಳಾದ ತುಳಸಿ ಗೌಡ ಅವರ ನಿಧನದ ಬೆನ್ನಲ್ಲೇ ಈಗ ಸುಕ್ರಿ ಬೊಮ್ಮಗೌಡ ಅವರ ಅಗಲಿಕೆಯಿಂದ ಜಾನಪದ ಪ್ರಪಂಚ ದೊಡ್ಡ ಶೂನ್ಯಕ್ಕೆ ಒಳಗಾಗಿದೆ. ಅವರ ನಿಧನ ಸಂಸ್ಕೃತಿ, ಸಂಗೀತ ಮತ್ತು ಹೋರಾಟದ ಲೋಕಕ್ಕೆ ಅಪಾರ ನಷ್ಟವಾಗಿದೆ.